ಕೋಲ್ಕತಾ :ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ಯಾಸ್ ಚಂಡಮಾರುತದ ಆರ್ಭಟ ಶುರುವಾಗಿದೆ. ಈ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮವಾಗಿ ತಗ್ಗು ಪ್ರದೇಶಗಳ ಸುಮಾರು 20 ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.
ಪ್ರಬಲ ಚಂಡಮಾರುತ ಯಾಸ್ ಒಡಿಶಾದ ಭದ್ರಕ್ ಜಿಲ್ಲೆಯ ಧಾಮ್ರ ಬಂದರು ಸಮೀಪದಲ್ಲಿ ಇಂದು ಮಧ್ಯಾಹ್ನ ಭೂಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆೀ
ಒಡಿಶಾ, ಬಂಗಾಳದ ಕಡಲ ತೀರದಲ್ಲಿ ಭಾರೀ ಮಳೆ.. ಕಡಲ ತೀರದ ಅನೇಕ ಪ್ರದೇಶಗಳಲ್ಲಿ ಈಗಾಗಲೇ ಭಾರೀ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆ ‘ಯಾಸ್’ ಚಂಡಮಾರುತ ಇಂದು ಮಧ್ಯಾಹ್ನದ ವೇಳೆಗೆ ಭೂಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಹೇಳಿದೆ.
ಕೋಲ್ಕತಾದ ನೇತಾಜಿ ಸುಭಾಷ್ ಚಂದ್ರ ಬೋಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯವನ್ನು ಇಂದು ರಾತ್ರಿ 7.45 ರವರೆಗೆ ಸ್ಥಗಿತಗೊಳಿಸಲಾಗಿದೆ.
ಭುವನೇಶ್ವರದಲ್ಲಿರುವ ಬಿಜು ಪಟ್ನಾಯಕ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಗುರುವಾರ ಬೆಳಗ್ಗೆ 5 ಗಂಟೆಯವರೆಗೆ ಮುಚ್ಚಲಾಗಿದೆ.
ಒಡಿಶಾದ ಜಾರ್ಸುಗುಡಾದ ವೀರ್ ಸುರೇಂದ್ರ ಸಾಯಿ ವಿಮಾನ ನಿಲ್ದಾಣವನ್ನು ಗುರುವಾರ ರಾತ್ರಿ 7.45ರವರೆಗೆ ಬಂದ್ ಮಾಡಲಾಗಿದೆ. ದುರ್ಗಾಪುರ ಮತ್ತು ರೂರ್ಕೆಲಾ ವಿಮಾನ ನಿಲ್ದಾಣಗಳು ಇಂದು ಮುಚ್ಚಲ್ಪಡುತ್ತವೆ.
ಯಾಸ್ ಚಂಡಮಾರುತ ಒಡಿಶಾದ ಭದ್ರಾಕ್ ಜಿಲ್ಲೆಯ ಧಮ್ರಾ ಬಂದರಿನ ಬಳಿ ಬೆಳಗ್ಗೆ 9 ಗಂಟೆಗೆ ಭೂಪ್ರದೇಶವನ್ನು ಸ್ಪರ್ಷಿಸಲು ಪ್ರಾರಂಭಿಸಿದೆ.
ಹಲವೆಡೆ ದೊಡ್ಡ ದೊಡ್ಡ ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಚಾಂದ್‌ಬಾಲಿ ಜಿಲ್ಲೆಯಲ್ಲಿ ಗರಿಷ್ಠ ಹಾನಿಯಾಗುವ ಸಾಧ್ಯತೆ ಇದೆ.
ಇದನ್ನೂ ಓದಿ:ಒಡಿಶಾದ ಬಾಲಸೋರ್ನಲ್ಲಿ ‘ಯಾಸ್’ ಚಂಡಮಾರುತದ ಭೂಸ್ಪರ್ಶ ಪ್ರಕ್ರಿಯೆ ಪ್ರಾರಂಭ
ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ 112 ತುಕಡಿಗಳನ್ನು ನಿಯೋಜಿಸಲಾಗಿದೆ. ಇದರಲ್ಲಿ 52 ತಂಡಗಳನ್ನು ಒಡಿಶಾಕ್ಕೆ ಹಾಗೂ 45 ತಂಡಗಳನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಗಿದೆ.
ಆಂಧ್ರಪ್ರದೇಶ, ತಮಿಳುನಾಡು, ಜಾರ್ಖಂಡ್ ಹಾಗೂ ಅಂಡಮಾನ್ ನಿಕೋಬಾರ್‌ನಲ್ಲಿ ಸಹ ಚಂಡಮಾರುತದ ಭೀತಿ ಇದೆ. ಇದರಿಂದಾಗಿ ಅಲ್ಲಿಯೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಒಡಿಶಾದ ಜಗತ್ಸಿಂಗ್‌ಪುರ, ಕೇಂದ್ರಪಾರ, ಭದ್ರಾಕ್ ಮತ್ತು ಬಾಲಸೋರ್ ಜಿಲ್ಲೆಗಳು ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ. ಬಂಗಾಳ, ಪಶ್ಚಿಮ ಮೆದಿನಿಪುರ, ಉತ್ತರ ಮತ್ತು ದಕ್ಷಿಣ 24 ಪರಗಣ ಜಿಲ್ಲೆಗಳು ಮತ್ತು ಕೋಲ್ಕತಾದಲ್ಲಿ ಗಂಟೆಗೆ 120 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಇದೆ.
ಬಂಗಾಳದಲ್ಲಿ ಬಲವಾದ ಗಾಳಿ ಬೀಸುತ್ತಿದೆ ಮತ್ತು ಸಮುದ್ರದ ಅಲೆಗಳು ಆರ್ಭಟಿಸುತ್ತಿವೆ. ಪೂರ್ವ ಮದಿನಿಪುರದ ಕರಾವಳಿಯಲ್ಲಿ ಪ್ರಬಲ ಅಲೆಗಳು ಬರುತ್ತಿವೆ. ಒಡಿಶಾ ಮತ್ತು ಪಶ್ಚಿಮಬಂಗಾಳ ಕರಾವಳಿ ಪ್ರದೇಶದಲ್ಲಿ ಭಾರೀ ಗಾಳಿ, ಮಳೆ ಆರಂಭವಾಗಿರುವುದಾಗಿ ವರದಿ ಹೇಳಿದೆ.