ಹೈದರಾಬಾದ್ (ತೆಲಂಗಾಣ): ತೆಲಂಗಾಣ, ರಾಜಸ್ಥಾನ, ಮಧ್ಯಪ್ರದೇಶ, ಛತ್ತೀಸ್‌ಗಢದಲ್ಲಿ ಇಂದು ಬೆಳಗ್ಗೆ 8 ಗಂಟೆಯಿಂದ ವಿಧಾನಸಭಾ ಚುನಾವಣೆಯ ಮತ ಎಣಿಕೆ ಶುರುವಾಗಿದೆ. ತೆಲಂಗಾಣದ 119 ಕ್ಷೇತ್ರಗಳ ಫಲಿತಾಂಶವೂ ಇಂದು ಹೊರಬೀಳಲಿದೆ. ತೆಲಂಗಾಣದಲ್ಲಿ ಅಖಿಲ ಭಾರತ ಕಾಂಗ್ರೆಸ್ ವೀಕ್ಷಕ ಮಾಣಿಕ್ ರಾವ್ ಠಾಕ್ರೆ (Manikrao Thackeray) 70ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಗಳೂ ಸಹ ಇದನ್ನೇ ಸೂಚಿಸಿದೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಮಾಣಿಕ್ ರಾವ್ ಠಾಕ್ರೆ, "ನಮ್ಮ ಪಕ್ಷದ ಮುಖ್ಯಸ್ಥರಾದ ಪ್ರಿಯಾಂಕಾ ಗಾಂಧಿ, ಮಲ್ಲಿಕಾರ್ಜುನ್ ಖರ್ಗೆ ಅವರು ನಮ್ಮ ನೀತಿಗಳ ಬಗ್ಗೆ ಜನರಲ್ಲಿ ಅರಿವು ಮೂಡಿಸುವ ಕೆಲಸ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ಹೆಚ್ಚಿನ ಪ್ರಭಾವ ಬೀರಿದೆ. ಅದೇ ಕೆಸಿಆರ್ ಅವರು ತೆಲಂಗಾಣದಲ್ಲಿ ರಾಜನಂತೆ ವರ್ತಿಸಿದರು. ಕಾಂಗ್ರೆಸ್ ತೆಲಂಗಾಣ ಜನತೆ ಮೇಲೆ ಪ್ರಭಾವ ಬೀರಿದೆ. ಹಾಗಾಗಿ ಕಾಂಗ್ರೆಸ್ ಬರಲಿ ಎಂದು ಎಲ್ಲರೂ ಬಯಸಿದ್ದಾರೆ. ತೆಲಂಗಾಣ ಉತ್ತಮ ರಾಜ್ಯವಾಗುತ್ತದೆ ಎಂದು ಜನ ಬಯಸಿದ್ದರು, ಆದರೆ, ಅದು ಈವರೆಗೆ ಸಂಭವಿಸಿಲ್ಲ. ಕಾಂಗ್ರೆಸ್ 70ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲುತ್ತದೆ ಮತ್ತು ಸಮೀಕ್ಷೆಗಳೂ ಕೂಡ ಅದನ್ನೇ ಹೇಳಿವೆ ಎಂದು ಅವರು ತಿಳಿಸಿದರು.
ಕಾಂಗ್ರೆಸ್ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ ಮಾಣಿಕ್ ರಾವ್ ಠಾಕ್ರೆ, ಪ್ರಸ್ತುತ ಅಧಿಕಾರದಲ್ಲಿರುವ ಸಿಎಂ ಕೆಸಿಆರ್ ವಿರುದ್ಧ ವಾಗ್ದಾಳಿ ಕೂಡ ನಡೆಸಿದರು. ಕಾಂಗ್ರೆಸ್ ಜನರನ್ನು ತಲುಪಿದೆ. ಜನರೊಂದಿಗೆ ಸಂಪರ್ಕ ಸಾಧಿಸಿದೆ. ಜನರ ಗಮನ ಪಕ್ಷದತ್ತ ನೆಟ್ಟಿದೆ ಎಂದು ತಿಳಿಸಿದರು.