ಹೈದರಾಬಾದ್: 2023ರ ತೆಲಂಗಾಣ ವಿಧಾನಸಭಾ ಚುನಾವಣೆಯಲ್ಲಿ ವೈಎಸ್ಆರ್ ತೆಲಂಗಾಣ ಪಕ್ಷ ಸ್ಪರ್ಧಿಸುವುದಿಲ್ಲ ಎಂದು ಪಕ್ಷದ ಅಧ್ಯಕ್ಷೆ ವೈ.ಎಸ್.ಶರ್ಮಿಳಾ ಘೋಷಿಸಿದ್ದಾರೆ. ಹೈದರಾಬಾದ್ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ರಾಷ್ಟ್ರ ಸಮಿತಿ (ಬಿಆಆರ್ಎಸ್) ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್ ಅವರ 'ಭ್ರಷ್ಟ ಮತ್ತು ಸರ್ವಾಧಿಕಾರಿ' ಆಡಳಿತವನ್ನು ಕೊನೆಗೊಳಿಸುವ ಅವಕಾಶ ಇರುವುದರಿಂದ ಕಾಂಗ್ರೆಸ್ ಅನ್ನು ಬೆಂಬಲಿಸಲು ಪಕ್ಷ ನಿರ್ಧರಿಸಿದೆ ಎಂದು ಹೇಳಿದರು. ಕಾಂಗ್ರೆಸ್ನ ಮತ ವಿಭಜನೆಯಾಗುವುದನ್ನು ತಾವು ಬಯಸುವುದಿಲ್ಲ ಎಂದು ಅವರು ತಿಳಿಸಿದರು.
ಶರ್ಮಿಳಾ ಅವರು ಕಾಂಗ್ರೆಸ್ ಜೊತೆ ಕೈ ಜೋಡಿಸಲಿದ್ದಾರೆ ಎಂಬ ಊಹಾಪೋಹಗಳು ಕೆಲ ತಿಂಗಳ ಹಿಂದೆ ಹಬ್ಬಿದ್ದವು. ಆದಾಗ್ಯೂ ವೈಎಸ್ಆರ್ಟಿಪಿ 119 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ ಎಂದು ಶರ್ಮಿಳಾ ಅಕ್ಟೋಬರ್ ಎರಡನೇ ವಾರದಲ್ಲಿ ಘೋಷಿಸಿದ್ದರು. ಶರ್ಮಿಳಾ ಅವರು ಅಕ್ಟೋಬರ್-2021 ರಲ್ಲಿ ತಮ್ಮ 4,000 ಕಿಲೋಮೀಟರ್ ಪ್ರಯಾಣದ 'ಮಾರೋ ಪ್ರಜಾ ಪ್ರಸ್ಥಾನಂ' ಪಾದಯಾತ್ರೆಯನ್ನು ಪ್ರಾರಂಭಿಸಿದ್ದರು.
ಈ ಹಿಂದೆ ಅಕ್ಟೋಬರ್ 12 ರಂದು ವೈಎಸ್ಆರ್ಟಿಪಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಘೋಷಿಸಿತ್ತು. ಅವರ ತಾಯಿ ವಿಜಯಮ್ಮ ಕೂಡ ಸಿಕಂದರಾಬಾದ್ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎಂದು ಊಹಿಸಲಾಗಿತ್ತು. ಕಾಂಗ್ರೆಸ್ನೊಂದಿಗೆ ವಿಲೀನದ ಮಾತುಕತೆ ನಡೆಸಲು ಪ್ರಯತ್ನಿಸಿದ ನಂತರ ಶರ್ಮಿಳಾ ಈ ನಿರ್ಧಾರ ತೆಗೆದುಕೊಂಡಿದ್ದರು. ಪಕ್ಷದ ಅಧ್ಯಕ್ಷೆ ವೈ.ಎಸ್. ಶರ್ಮಿಳಾ ಅವರು ಖಮ್ಮಮ್ ನ ಪಲೈರ್ ನಿಂದ ಸ್ಪರ್ಧಿಸಲಿದ್ದಾರೆ ಎಂದು ಪಕ್ಷವು ಈ ಹಿಂದೆ ಘೋಷಿಸಿತ್ತು.