ನವದೆಹಲಿ: ಕಾವೇರಿ ನದಿ ನೀರು ವಿಚಾರದಲ್ಲಿ ಸಿಡಬ್ಲ್ಯೂಎಂಎ ಆದೇಶಕ್ಕೆ ತಡೆ ನೀಡುವಂತೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರು ಮತ್ತು ಸರ್ವಪಕ್ಷಗಳ ಸಂಸದರೊಂದಿಗೆ ಸಭೆ ನಡೆಸಿದ ನಂತರ ಅವರು ಮಾತನಾಡಿದರು.
ಸಿಡಬ್ಲ್ಯೂಎಂಎ ಆದೇಶಕ್ಕೆ ಸುಪ್ರೀಂ ಕೋರ್ಟ್ ನಲ್ಲಿ ತಡೆಯಾಜ್ಞೆ ಕೋರಲಿದ್ದೇವೆ. ತಮಿಳುನಾಡಿಗೆ ನೀರು ಬಿಡುವಂತೆ ಸಿಡಬ್ಲ್ಯೂಎಂಎ ನೀಡಿರುವ ಆದೇಶಕ್ಕೆ ತಡೆಯಾಜ್ಞೆ ನೀಡುವಂತೆ ನಾವು ಸುಪ್ರೀಂ ಕೋರ್ಟ್ ಗೆ ಮನವಿ ಮಾಡುತ್ತೇವೆ. ನಮ್ಮ ನೈಜ ಪರಿಸ್ಥಿತಿಯನ್ನು ಸಿಡಬ್ಲ್ಯೂಎಂಎ ಮುಂದೆ ಸಮರ್ಥವಾಗಿ ಪ್ರಸ್ತುತಪಡಿಸಿದ್ದೇವೆ. 123 ವರ್ಷಗಳಲ್ಲಿ ಈ ವರ್ಷದ ಆಗಸ್ಟ್ನಲ್ಲಿ ಅತ್ಯಂತ ಕಡಿಮೆ ಮಳೆಯಾಗಿದ್ದು, ಹೆಚ್ಚಿನ ಸಂಕಷ್ಟಕ್ಕೆ ಕಾರಣವಾಗಿದೆ. ನಮಗೇ ಕುಡಿಯುವ ನೀರಿಲ್ಲ, ಬೆಳೆ ರಕ್ಷಣೆಗೆ ನೀರಿಲ್ಲ, ಕೈಗಾರಿಕೆಗಳಿಗೆ ನೀರಿಲ್ಲ. ನಾವು ಸಾಕಷ್ಟು ತೊಂದರೆಯಲ್ಲಿದ್ದೇವೆ." ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಎರಡೂ ರಾಜ್ಯಗಳೊಂದಿಗೆ ಮಾತನಾಡುವ ಅಧಿಕಾರ ಪ್ರಧಾನಿಗೆ ಇರುವುದರಿಂದ ಈ ವಿಷಯದಲ್ಲಿ ಪ್ರಧಾನಿ ಮಧ್ಯಪ್ರವೇಶಿಸಬೇಕು ಎಂದು ಸಿಎಂ ಹೇಳಿದರು. "ಎರಡೂ ರಾಜ್ಯಗಳೊಂದಿಗೆ ಮಾತನಾಡುವ ಅಧಿಕಾರ ಪ್ರಧಾನಿಗೆ ಇದೆ. ಆದ್ದರಿಂದ ನಾವು ಪ್ರಧಾನಿಯವರ ಮಧ್ಯಪ್ರವೇಶಕ್ಕಾಗಿ ಮನವಿ ಮಾಡಿದ್ದೇವೆ. ಕೇಂದ್ರ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿದ ನಂತರ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು. ಈಗಾಗಲೇ ರಾಜ್ಯದ 195 ತಾಲೂಕುಗಳನ್ನು ಬರಪೀಡಿತ ಎಂದು ಗುರುತಿಸಲಾಗಿದೆ. ಕಳೆದ 123 ವರ್ಷಗಳಲ್ಲಿಯೇ ಈ ಬಾರಿ ಆಗಸ್ಟ್ನಲ್ಲಿ ಅತಿ ಕಡಿಮೆ ಮಳೆಯಾಗಿದೆ" ಎಂದು ಸಿದ್ದರಾಮಯ್ಯ ನುಡಿದರು.