ಮಜುಲಿ (ಅಸ್ಸೋಂ):ಅಸೋಂ ರಾಜ್ಯದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಶೀಘ್ರವೇ ಜಾರಿಗೆ ಬರಲಿದೆ ಎಂದು ರಾಜ್ಯ ಬಿಜೆಪಿ ಮುಖ್ಯಸ್ಥ ರಂಜೀತ್ ಕುಮಾರ್ ದಾಸ್ ಹೇಳಿದ್ದಾರೆ.
ನಾವು ಸಂಸತ್ತಿನಲ್ಲಿ ಮಸೂದೆಯನ್ನು ಅಂಗೀಕರಿಸಿದ್ದೇವೆ ಮತ್ತು ನಾವು ಅದರ ಪರವಾಗಿಯೇ ನಿಲ್ಲುತ್ತೇವೆ. ಅಸ್ಸೋಂನಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ನಾವು ಸಿಎಎ ಜಾರಿಗೆ ತರುತ್ತೇವೆ ಎಂದು ತಿಳಿಸಿದ್ದಾರೆ.
ಅಸ್ಸೋಂನಲ್ಲಿ ಸಿಎಎ ಜಾರಿಗೆ ತರಲು ಅನುಮತಿಸುವುದಿಲ್ಲ ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ರಂಜಿತ್ ದಾಸ್, ರಾಹುಲ್ ಗಾಂಧಿಗೆ ಸಿಎಎ ಬಗ್ಗೆ ಏನೂ ತಿಳಿದಿಲ್ಲ. ಈ ವಿಚಾರವಾಗಿ ನಾನು ಬೇಕಾದರೆ ಚಾಲೆಂಜ್ ಮಾಡುತ್ತೇನೆ. ನಮ್ಮ ಬೂತ್ ಮಟ್ಟದ ಕೆಲಸಗಾರರಿಗೆ ಸಹ ಸಿಎಎ ಬಗ್ಗೆ ರಾಹುಲ್ಗಿಂತ ಹೆಚ್ಚು ತಿಳಿದಿದೆ ಎಂದು ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ:ಪ. ಬಂಗಾಳ; ಟಿಎಂಸಿ ಕಾರ್ಯಕರ್ತ ಸಾವು.. ಬಿಜೆಪಿ ವಿರುದ್ಧ ಕೊಲೆ ಆರೋಪ
ವಿಧಾನಸಭಾ ಚುನಾವಣೆಯ ಮೇಲೆ ಸಿಎಎ ಯಾವುದೇ ಪರಿಣಾಮ ಬೀರುವುದಿಲ್ಲ. ಪೌರತ್ವ ಸಮಸ್ಯೆ ಉತ್ತುಂಗದಲ್ಲಿದ್ದಾಗ, ನಾವು ಪಂಚಾಯತ್ ಚುನಾವಣೆಯಲ್ಲಿ ಭಾಗವಹಿಸಿದ್ದೆವು. ನಾವು ಆ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದುಕೊಂಡಿದ್ದೇವೆ. 2019 ರ ಲೋಕಸಭಾ ಚುನಾವಣೆಯ ಸಮಯದಲ್ಲಿಯೂ ಸಿಎಎ ವಿಷಯವಿತ್ತು. ಆದರೆ ಬಿಜೆಪಿ ತನ್ನ ಸಂಖ್ಯೆಯನ್ನು ಏಳರಿಂದ ಒಂಬತ್ತು ಸ್ಥಾನಗಳಿಗೆ ಹೆಚ್ಚಿಸುವಲ್ಲಿ ಯಶಸ್ವಿಯಾಗಿದೆ ಎಂದಿದ್ದಾರೆ.