ನವದೆಹಲಿ: ಬಿಹಾರದಂತೆ ಛತ್ತೀಸ್‌ಗಢದಲ್ಲೂ ನಮ್ಮ ರಾಜ್ಯ ಸರ್ಕಾರ ಜಾತಿ ಆಧಾರಿತ ಜನಗಣತಿಯನ್ನು ನಡೆಸಲಿದೆ ಎಂದು ಕಾಂಗ್ರೆಸ್ ನಾಯಕ ಮತ್ತು ಛತ್ತೀಸ್‌ಗಢ ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವ್ ತಿಳಿಸಿದ್ದಾರೆ. ಈಗಾಗಲೇ ರಾಜಸ್ಥಾನದ ಕಾಂಗ್ರೆಸ್ ಸರ್ಕಾರ ತನ್ನ ರಾಜ್ಯದಲ್ಲಿ ಜಾತಿ ಗಣತಿ ನಡೆಸಲು ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಛತ್ತೀಸ್‌ಗಢ ಸರ್ಕಾರವು ಜಾತಿ ಗಣತಿ ಸುಳಿವು ನೀಡಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಅವರು ಜಾತಿ ಗಣತಿ ಬಗ್ಗೆ ಪ್ರತಿಕ್ರಿಯಿಸಿ, ಬಿಹಾರದಲ್ಲಿ ಏನು ನಡೆದಿದೆ. ಅದನ್ನು ನಾವು ಮಾಡುತ್ತೇವೆ. ಯಾವ ಸಮುದಾಯಗಳಲ್ಲಿ ಎಷ್ಟು ನಿರ್ದಿಷ್ಟ ಆರ್ಥಿಕತೆ ಮಟ್ಟ ಇದೆ ಎಂಬುದು ಇಂದೂ ನಮಗೆ ಗೊತ್ತಿಲ್ಲ. ಅಲ್ಲದೇ, ಎಷ್ಟು ಮಂದಿ ಯಾವ ವರ್ಗಕ್ಕೆ ಸೇರಿದವರು ಎಂಬ ಪ್ರಶ್ನೆ ಯಾವಾಗಲೂ ಕಾಡುತ್ತದೆ. ಸಾಮಾನ್ಯ ಜನಗಣತಿಯು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಡಗ ಜನಸಂಖ್ಯೆಯನ್ನು ಒಳಗೊಂಡಿರುತ್ತದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬಿಹಾರ ಜಾತಿ ಗಣತಿಯ ಹೆಚ್ಚುವರಿ ಮಾಹಿತಿ ಬಿಡುಗಡೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಕಾರ
ನಿತೀಶ್ ಕುಮಾರ್ ನೇತೃತ್ವದ ಬಿಹಾರ ಸರ್ಕಾರವು ದೇಶದಲ್ಲೇ ಜಾತಿ ಗಣತಿ ಸಮೀಕ್ಷೆಯ ವರದಿ ಬಿಡುಗಡೆ ಮಾಡಿದೆ. 2024ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿ ಹಿಂದುಳಿದ ಜಾತಿಗಳ ಅಸ್ತ್ರವನ್ನು ಪ್ರಯೋಗಿಸುತ್ತಿದೆ. ಇದಕ್ಕೆ ಪ್ರತಿಯಾಗಿ ಪ್ರತಿಪಕ್ಷಗಳು ಜಾತಿ ಗಣತಿ ನಡೆಸುವ ಅಸ್ತ್ರ ಬಿಡುತ್ತಿವೆ. ಬಿಹಾರ ಸಿಎಂ ನಿತೀಶ್ ನೇತೃತ್ವದ ಜೆಡಿಯು ಮತ್ತು ಮಾಜಿ ಸಿಎಂ ಲಾಲು ಪ್ರಸಾದ್ ಯಾದವ್ ನೇತೃತ್ವದ ಆರ್ಜೆಡಿ ಸಮ್ಮಿಶ್ರ ಸರ್ಕಾರ ಜಾತಿ ಗಣತಿ ವರದಿ ಬಹಿರಂಗ ಪಡಿಸುವುದು ದೇಶಾದ್ಯಂತ ರಾಜಕೀಯ ವಿಷಯವಾಗಿ ಚರ್ಚೆ ನಡೆಯುತ್ತಿದೆ.
ಬಿಹಾರ ಸರ್ಕಾರದ ವರದಿ ಪ್ರಕಾರ, ರಾಜ್ಯದ ಒಟ್ಟು ಜನಸಂಖ್ಯೆಯಲ್ಲಿ ಶೇ.63ರಷ್ಟು ಅತ್ಯಂತ ಹಿಂದುಳಿದ ಹಾಗೂ ಇತರ ಹಿಂದುಳಿದ ವರ್ಗದವರಿದ್ದಾರೆ. ಜಾತಿ ಗಣತಿ ಮೂಲಕ ಆಯಾ ಜಾತಿಗಳ ಇತ್ತೀಚಿನ ಜನಸಂಖ್ಯೆಯ ವಿವರಗಳನ್ನು ಪ್ರಕಟಿಸಲಾಗುತ್ತದೆ. ಇದರೊಂದಿಗೆ ಆಯಾ ಹಿಂದುಳಿದ ಜಾತಿಗಳಿಗೆ ಅಗತ್ಯವಾದ ಸೌಲಭ್ಯಗಳು ಹಾಗೂ ಹಕ್ಕುಗಳನ್ನು ಕಲ್ಪಿಸಲಾಗುತ್ತದೆ ಎಂಬ ಭರವಸೆಯನ್ನು ರಾಜಕೀಯ ಪಕ್ಷಗಳು ನೀಡುತ್ತಿವೆ.
ಅದರಲ್ಲೂ ದೇಶದಲ್ಲಿ ಜಾತಿ ಗಣತಿ ಕುರಿತು ಕಾಂಗ್ರೆಸ್ ಪ್ರಬಲ ಧ್ವನಿ ಎತ್ತುತ್ತಿದೆ. ಹಿಂದುಳಿದ ವರ್ಗಗಳಿಗೆ ಸೇರಿದ ಶೇ.50ರಷ್ಟು ಜನರಿಗೆ ತಮ್ಮ ಹಕ್ಕುಗಳು ಮತ್ತು ಸೂಕ್ತ ಪ್ರಾತಿನಿಧ್ಯ ಸಿಗುತ್ತಿಲ್ಲ. ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಜಾತಿ ಗಣತಿ ನಡೆಸಲಾಗುತ್ತದೆ. ದೇಶದಲ್ಲಿ ಒಬಿಸಿ ಜನಸಂಖ್ಯೆ ಎಷ್ಟಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಎಷ್ಟು ಹಿಂದುಳಿದ ವರ್ಗದವರಿದ್ದಾರೆ ಎಂಬುದು ತಿಳಿದುಕೊಳ್ಳುವುದು ಮುಖ್ಯ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇತ್ತೀಚೆಗೆ ಮಧ್ಯಪ್ರದೇಶದಲ್ಲಿ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ:ಜನಸಂಖ್ಯೆಗೆ ಅನುಗುಣವಾಗಿ ಹಕ್ಕುಗಳನ್ನು ನೀಡಬಹುದೇ? ಮುಸ್ಲಿಮರ ಹಕ್ಕು ಕಸಿದುಕೊಳ್ಳಲು ಕಾಂಗ್ರೆಸ್ ಬಯಸುತ್ತದೆಯೇ?: ಪ್ರಧಾನಿ ಮೋದಿ