ನವದೆಹಲಿ: ಈ ಹಿಂದಿನಿಂದಲೂ ಭಾರತ - ರಷ್ಯಾ ನಡುವೆ ಉತ್ತಮ ಸಂಬಂಧವಿದ್ದು, ಅನೇಕ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ. ಇದೀಗ ಮತ್ತೊಮ್ಮೆ ಭಾರತದ ಪ್ರವಾಸ ಕೈಗೊಂಡಿರುವ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ 21ನೇ ವಾರ್ಷಿಕ ಭಾರತ - ರಷ್ಯಾ ಶೃಂಗಸಭೆಯಲ್ಲಿ ಭಾಗಿಯಾದರು.
ಪ್ರಧಾನಿ ಮೋದಿ ಜೊತೆಗಿನ ಮಹತ್ವದ ಚರ್ಚೆ ವೇಳೆ ಭಾರತದ ಗುಣಗಾನ ಮಾಡಿರುವ ವಾಡ್ಲಿಮಿರ್, ಭಾರತವನ್ನ ನಾವು ಮಹಾನ್ ಶಕ್ತಿ, ಸ್ನೇಹಪರ ರಾಷ್ಟ್ರ ಮತ್ತು ಸಮಯ ಪರೀಕ್ಷಿತ ಸ್ನೇಹಿತ ಎಂದಿದ್ದಾರೆ. ಈ ಶೃಂಗಸಭೆವೊಂದಿಗೆ ಭಾರತ - ರಷ್ಯಾ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿದ್ದು, ಭವಿಷ್ಯದ ದೃಷ್ಟಿಯಿಂದ ಈ ಚರ್ಚೆ ಬಹಳ ಮಹತ್ವ ಪಡೆದುಕೊಂಡಿದೆ ಎಂದರು.
ಈ ಹಿಂದೆ 2019ರಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಲು ಪುಟಿನ್ ಭಾರತದ ಪ್ರವಾಸ ಕೈಗೊಂಡಿದ್ದರು. ಇದಾದ ಬಳಿಕ ರಷ್ಯಾ ಅಧ್ಯಕ್ಷರು ಕೈಗೊಂಡಿರುವ ಮೊದಲ ಭಾರತದ ಪ್ರವಾಸ ಇದಾಗಿದೆ. ಉಭಯ ನಾಯಕರು ದೆಹಲಿಯಲ್ಲಿರುವ ಹೈದರಾಬಾದ್ ಹೌಸ್ನಲ್ಲಿ ಮಹತ್ವದ ಮಾತುಕತೆಯಲ್ಲಿ ಭಾಗಿಯಾದರು. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ-ರಷ್ಯಾ ನಡುವಿನ ಸಂಬಂಧ ಸದೃಢವಾಗಿದ್ದು,ವಿಶ್ವಾಸಾರ್ಹವಾಗಿದೆ ಎಂದರು.