ನವದೆಹಲಿ:ರಾಜ್ಯಸಭೆಯ 12 ಸಂಸದರನ್ನು ಅಮಾನತು ಮಾಡಿದ್ದರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, 'ಎಷ್ಟು ದಿನಗಳವರೆಗೆ ನೀವು ವಿರೋಧ ಪಕ್ಷಗಳನ್ನು ದೂರ ಇಡುತ್ತೀರಿ' ಎಂದು ಪ್ರಶ್ನಿಸಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸದಸ್ಯರ ಅಮಾನತನ್ನು ಸಭಾಪತಿಗಳು ವಾಪಸ್ ಪಡೆಯಲು ಸಿದ್ಧರಿಲ್ಲ. ಪ್ರಜಾಪ್ರಭುತ್ವದಲ್ಲಿ ವಿರೋಧ ಪಕ್ಷವನ್ನು ಎಷ್ಟು ದಿನಗಳವರೆಗೆ ಹೀಗೆ ದೂರ ಇಡುತ್ತೀರಿ. ಸುಗಮ ಕಲಾಪಕ್ಕೆ ನಾವು ಸಹಕರಿಸಲು ಸಿದ್ಧ. ಆದರೆ, ವಿಪಕ್ಷಗಳ ಕೆಲ ಷರತ್ತುಗಳನ್ನು ಸರ್ಕಾರ ಒಪ್ಪಿಕೊಳ್ಳಬೇಕು ಎಂದು ಖರ್ಗೆ ಸಭಾಧ್ಯಕ್ಷರನ್ನು ಒತ್ತಾಯಿಸಿದ್ದಾರೆ.
ಪ್ರತಿಪಕ್ಷದ ಸಂಸದರನ್ನು ಅಮಾನತು ಮಾಡಿದ್ದರ ಬಗ್ಗೆ ಸಭಾಪತಿಗಳು ತಮ್ಮ ನಿರ್ಣಯವನ್ನು ಮರುಪರಿಶೀಲಿಸಬೇಕು. ಸದಸ್ಯರ ಅಮಾನತು ಆದೇಶ ಹಿಂಪಡೆದು ಸದನ ಸುಗಮವಾಗಿ ನಡೆಯಲು ಅವಕಾಶ ಮಾಡಿಕೊಡಬೇಕು ಎಂದು ಮಲ್ಲಿಕಾರ್ಜುನ ಖರ್ಗೆ ಮನವಿ ಮಾಡಿದ್ದಾರೆ.