ನವದೆಹಲಿ :ಜೆಎನ್ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಹಾಗೂ ಭಾರತೀಯ ಕಮ್ಯುನಿಸ್ಟ್ ಪಕ್ಷದ(ಸಿಪಿಐ) ಮುಖಂಡ ಕನ್ಹಯ್ಯಕುಮಾರ್ ಹಾಗೂ ಗುಜರಾತ್ನ ಶಾಸಕ ಜಿಗ್ನೇಶ್ ಮೇವಾನಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹಾಗೂ ಕೆ ಸಿ ವೇಣುಗೋಪಾಲ್ ನೇತೃತ್ವದಲ್ಲಿ ಅವರು ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಪಕ್ಷ ಸೇರ್ಪಡೆಗೊಳ್ಳುತ್ತಿದ್ದಂತೆ ಮಾತನಾಡಿರುವ ಕೆ ಸಿ ವೇಣುಗೋಪಾಲ್, ಕನ್ಹಯ್ಯ ಕುಮಾರ್ ಮತ್ತು ಜಿಗ್ನೇಶ್ ಮೇವಾನಿ ಪಕ್ಷಕ್ಕೆ ಸೇರ್ಪಡೆಗೊಂಡಿರುವುದನ್ನ ಸ್ವಾಗತಿಸುವುದು ನಮಗೆ ಅತ್ಯಂತ ಸಂತೋಷದ ಕ್ಷಣವಾಗಿದೆ. ಕನ್ಹಯ್ಯ ಕುಮಾರ್ ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಹೋರಾಡುವ ಸಂಕೇತ ಎಂದಿದ್ದಾರೆ.
ವಿದ್ಯಾರ್ಥಿ ನಾಯಕನಾಗಿ ಮೂಲಭೂತವಾದದ ವಿರುದ್ಧ ಅವರು ಹೋರಾಡಿದ ರೀತಿ ದೇಶಕ್ಕೆ ಸಾಕ್ಷಿಯಾಗಿದೆ ಎಂದರು. ಈ ರೀತಿಯ ಯುವ ವ್ಯಕ್ತಿತ್ವ ಕಾಂಗ್ರೆಸ್ ಪಕ್ಷ ಸೇರುತ್ತಿರುವುದು ನಮ್ಮ ಪಕ್ಷದ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದ್ದು, ನಾವು ಅವರಿಗೆ ಕೃತಜ್ಞರಾಗಿದ್ದೇವೆ ಎಂದರು.