ಕರ್ನಾಟಕ

karnataka

ETV Bharat / bharat

ನಾಳೆ 'ಮಹಾ' ರಾಜಕೀಯ ಪರೀಕ್ಷೆ: 'ನಮಗೆ 50 ಶಾಸಕರ ಬಲ, ಗೆಲುವು ನಮ್ಮದೇ': ಏಕನಾಥ್​ ಶಿಂದೆ - ಮುಂಬೈನಲ್ಲಿ ಕಾಂಗ್ರೆಸ್​ ಸಭೆ

ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ನಾಟಕ ನಾಳೆ ಅಂತ್ಯ ಕಾಣುವ ಸಾಧ್ಯತೆ ಇದೆ. ವಿಶ್ವಾಸ ಮತಯಾಚನೆಗೆ ರಾಜ್ಯಪಾಲರು ಈಗಾಗಲೇ ಸೂಚಿಸಿದ್ದು, ಸಿಎಂ ಉದ್ಧವ್ ಠಾಕ್ರೆ ಇಂದು ಸಂಜೆ ಸಂಪುಟ ಸಭೆ ಕರೆದಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್​ ಕೂಡ ಸಭೆ ನಡೆಸುತ್ತಿದೆ.

ನಮಗೆ 50 ಶಾಸಕರ ಬಲ, ಗೆಲುವು ನಮ್ಮದೇ: ಏಕನಾಥ್​ ಶಿಂದೆ
ನಮಗೆ 50 ಶಾಸಕರ ಬಲ, ಗೆಲುವು ನಮ್ಮದೇ: ಏಕನಾಥ್​ ಶಿಂದೆ

By

Published : Jun 29, 2022, 4:24 PM IST

ಗುವಾಹಟಿ/ಮುಂಬೈ:ವಿಶ್ವಾಸಮತ ಯಾಚನೆಗೆ ರಾಜ್ಯಪಾಲರು ನಾಳೆ ಮುಹೂರ್ತ ನಿಗದಿಪಡಿಸಿದ ಬೆನ್ನಲ್ಲೇ ಮಹಾರಾಷ್ಟ್ರದಲ್ಲಿ ರಾಜಕೀಯ ಮತ್ತಷ್ಟು ಬಿರುಸು ಪಡೆದಿದೆ. ಸಂಜೆ 5 ಗಂಟೆಗೆ ಸಿಎಂ ಉದ್ಧವ್​ ಠಾಕ್ರೆ ಸಂಪುಟ ಸಭೆ ಕರೆದಿದ್ದರೆ, ಇತ್ತ ಕಾಂಗ್ರೆಸ್​ ಮುಂಬೈನಲ್ಲಿ ಸಭೆ ನಡೆಸುತ್ತಿದೆ. ಇನ್ನು ಗುವಾಹಟಿಯಲ್ಲಿರುವ ಬಂಡಾಯ ನಾಯಕ ಏಕನಾಥ ಶಿಂದೆ, "ನಮ್ಮಲ್ಲಿ 50 ಶಾಸಕರು ಇದ್ದು, ನಾಳಿನ ಪರೀಕ್ಷೆಯನ್ನು ಗೆದ್ದೇ ಗೆಲ್ಲುತ್ತೇವೆ" ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಗುವಾಹಟಿಯಿಂದ ಗೋವಾಕ್ಕೆ ತೆರಳುವ ಮುನ್ನ ಇಲ್ಲಿನ ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಮಾತನಾಡಿದ ಏಕನಾಥ್​ ಶಿಂದೆ, "ನಮ್ಮೊಂದಿಗೆ 50 ಶಾಸಕರು ಇದ್ದಾರೆ. 2/3 ಬೆಂಬಲವಿದೆ. ನಾವು ವಿಶ್ವಾಸಮತದ ಬಗ್ಗೆ ಚಿಂತಿಸುವುದಿಲ್ಲ. ಇದರಲ್ಲಿ ನಾವು ಗೆಲ್ಲುತ್ತೇವೆ" ಎಂದು ಹೇಳಿದರು.

"ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಂಖ್ಯೆ ಮತ್ತು ಬಹುಮತ ಅತ್ಯಂತ ಪ್ರಮುಖವಾದುದು. ಇದು ನಮಗಿದೆ. ಯಾರೂ ದೇಶದ ಸಂವಿಧಾನವನ್ನು ಮೀರಿ ಹೋಗಬೇಕಾಗಿಲ್ಲ. ನಮ್ಮ ನಿಲುವು ಎಂದಿಗೂ ಮಹಾರಾಷ್ಟ್ರದ ಪ್ರಗತಿ ಮತ್ತು ಹಿಂದುತ್ವದ ಪ್ರತಿಪಾದನೆಯೇ ಆಗಿರುತ್ತದೆ. ಹಾಗಾಗಿ ನಮ್ಮನ್ನು ಯಾರೂ ತಡೆಯಲು ಸಾಧ್ಯವಿಲ್ಲ" ಎಂದು ಶಿಂದೆ ವಿಶ್ವಾಸ ವ್ಯಕ್ತಪಡಿಸಿದರು.

ಬಿಜೆಪಿ ಜೊತೆ ಸರ್ಕಾರ ರಚನೆ ಪ್ರಶ್ನೆಗೆ, "ನಾಳೆ ನಡೆಯುವ ವಿಶ್ವಾಸಮತದ ಬಳಿಕ ಮುಂದಿನ ನಿರ್ಧಾರ ಮಾಡಲಾಗುವುದು" ಎಂದು ಅವರು ತಿಳಿಸಿದರು.

5 ಗಂಟೆಗೆ ಸಂಪುಟ ಸಭೆ: ವಿಶ್ವಾಸಮತ ಸಾಬೀತಿಗೆ ರಾಜ್ಯಪಾಲರು ಸೂಚಿಸಿದ ಕಾರಣ ಇಂದು ಸಂಜೆ 5 ಗಂಟೆಗೆ ಸಿಎಂ ಉದ್ಧವ್​ ಠಾಕ್ರೆ ನೇತೃತ್ವದಲ್ಲಿ ಸಂಪುಟ ಸಭೆ ಕರೆಯಲಾಗಿದೆ. ವಿಶ್ವಾಸಮತ ಸಾಬೀತು ಮಾಡುವಲ್ಲಿ ವಿಫಲವಾಗುವ ಸಾಧ್ಯತೆ ಇದ್ದು, ರಾಜೀನಾಮೆ ನೀಡಬೇಕೇ ಅಥವಾ ಮುಂದಿನ ಹೋರಾಟದ ರೂಪುರೇಷೆ ಹೆಣೆಯಲು ಈ ಸಭೆಯಲ್ಲಿ ನಿರ್ಧರಿಸುವ ಕುರಿತು ಸಭೆಯಲ್ಲಿ ತೀರ್ಮಾನಿಸುವ ಸಾಧ್ಯತೆ ಇದೆ.

ಬಿಜೆಪಿ ಟೀಕೆ:ಸಿಎಂ ಕರೆದ ಸಂಪುಟ ಸಭೆಗೆ ಬಿಜೆಪಿ ಟೀಕೆ ವ್ಯಕ್ತಪಡಿಸಿದೆ. ರಾಜ್ಯ ಸರ್ಕಾರ ಅಲ್ಪಮತಕ್ಕೆ ಕುಸಿದಿದೆ. ಹೀಗಾಗಿ ಸಂಪುಟ ಸಭೆ ನಡೆಸಬಾರದು. ಇದು ರಾಜಕೀಯಕ್ಕೆ ಶೋಭೆ ತರುವುದಿಲ್ಲ. ಅಲ್ಪಮತದ ಸರ್ಕಾರದ ಸಂಪುಟ ಸಭೆ ನಡೆಸುವುದು ಸರಿಯಲ್ಲ ಎಂದು ಬಿಜೆಪಿ ನಾಯಕ ಸುಧೀರ್ ಮುಂಗಂತಿವಾರ್ ಹೇಳಿದ್ದಾರೆ.

ಕಾಂಗ್ರೆಸ್​ ಸಭೆ:ಸರ್ಕಾರದ ಅಳಿವು ಉಳಿವಿನ ಪ್ರಶ್ನೆ ಉದ್ಭವಾದ ಕಾರಣ ಇತ್ತ ಕಾಂಗ್ರೆಸ್​ ಕೂಡ ಸಭೆ ನಡೆಸುತ್ತಿದೆ. ನಾಳೆ ವಿಶ್ವಾಸಮತಯಾಚನೆ ಇರುವ ಕಾರಣ ಮುಂಬೈನಲ್ಲಿ ಕಾಂಗ್ರೆಸ್ ನಾಯಕರು ಸಭೆ ನಡೆಸುತ್ತಿದ್ದು, ಮುಂದಿನ ಕಾರ್ಯತಂತ್ರದ ಕುರಿತು ಚರ್ಚಿಸಲಾಗುತ್ತಿದೆ.

ಅಶೋಕ್ ಚವ್ಹಾಣ್, ನಾನಾ ಪಟೋಲೆ, ಬಾಳಾಸಾಹೇಬ್ ಥೋರಟ್, ಸುನೀಲ್ ಕೇದಾರ್, ಚರಣ್ ಸಿಂಗ್ ಸಪ್ರಾ ಮತ್ತು ನಿತಿನ್ ರಾವುತ್ ಸೇರಿದಂತೆ ಪಕ್ಷದ ನಾಯಕರು ಭಾಗಿಯಾಗಿದ್ದಾರೆ.

ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಅವರು ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಆಘಾಡಿ (ಎಂವಿಎ) ಸರ್ಕಾರವನ್ನು ವಿಶ್ವಾಸಮತ ಸಾಬೀತುಪಡಿಸಲು ಗುರುವಾರಕ್ಕೆ ಮುಹೂರ್ತ ನಿಗದಿಪಡಿಸಿದ್ದಾರೆ. ಇದನ್ನು ಪ್ರಶ್ನಿಸಿ ಶಿವಸೇನೆ ಸುಪ್ರೀಂಕೋರ್ಟ್‌ ಮೊರೆ ಹೋಗಿದ್ದು, ಇಂದು ಸಂಜೆ 5 ಗಂಟೆಗೆ ವಿಚಾರಣೆ ನಿಗದಿಯಾಗಿದೆ.

ಇದನ್ನೂ ಓದಿ:ದರ್ಜಿ ಹಂತಕರ ಬೆನ್ನಟ್ಟಿ ಹಿಡಿದ ಪೊಲೀಸ್; ಎನ್​ಐಎಗೆ ಪೂರ್ಣ ತನಿಖೆ ಹೊಣೆ, ಕೇಸಲ್ಲಿ ಉಗ್ರರ ಕರಿನೆರಳು ಶಂಕೆ

ABOUT THE AUTHOR

...view details