ಬೆಂಗಳೂರು: ಚಂದ್ರನ ದಕ್ಷಿಣ ಧ್ರುವವು ಮಾನವ ವಸಾಹತುಗಳನ್ನು ರಚಿಸುವ ಸಾಮರ್ಥ್ಯ ಹೊಂದಿದೆ ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದರು. ಮಹತ್ವಾಕಾಂಕ್ಷೆ ಚಂದ್ರಯಾನ-3 ನೌಕೆಯನ್ನು ಜಟಿಲ ಹಾಗೂ ಕೌತುಕದಿಂದ ಕೂಡಿರುವ ಚಂದ್ರನ ದಕ್ಷಿಣ ಧ್ರುವದಲ್ಲಿಯೇ ಲಾಂಡಿಂಗ್ ಮಾಡಲು ನಿಖರ ಕಾರಣಗಳೇನು? ಭವಿಷ್ಯದಲ್ಲಿ ಅದರಿಂದಾಗುವ ಲಾಭಗಳೇನು ಅನ್ನೋದರ ಬಗ್ಗೆ ಅವರು ಕೆಲವು ಮಾಹಿತಿ ಹಂಚಿಕೊಂಡಿದ್ದಾರೆ.
ಕೋಟ್ಯಂತರ ಭಾರತೀಯರ ಕನಸು ಚಂದ್ರಯಾನ-3 ಯಶಸ್ವಿ ಬಳಿಕ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿರುವ ಎಸ್ ಸೋಮನಾಥ್, ಚಂದ್ರನ ದಕ್ಷಿಣ ಧ್ರುವ ಸಂಶೋಧನೆಗೆ ಯೋಗ್ಯವಾದ ಪ್ರದೇಶ. ಆ ಪ್ರದೇಶದಲ್ಲಿ ಹಿಮದ ರೂಪದಲ್ಲಿ ನೀರು ಸಂಗ್ರಹ ಆಗಿರಬಹುದು ಅನ್ನೋ ನಿರೀಕ್ಷೆಗಳಿವೆ. ಮಾನವ ವಸಾಹತುಗಳನ್ನು ರಚಿಸುವ ಸಾಮರ್ಥ್ಯ ಹೊಂದಿದೆ ಎಂದು ವಿಜ್ಞಾನಿಗಳು ಕೂಡ ನಂಬಿರುವುದರಿಂದ ಇಸ್ರೋ ಈ ದಕ್ಷಿಣ ಧ್ರುವವನ್ನು ಆಯ್ಕೆ ಮಾಡಿಕೊಂಡಿತು ಎಂದು ಅವರು ಹೇಳಿದ್ದಾರೆ.
"ನಾವು ಸುಮಾರು 70 ಡಿಗ್ರಿಗಳಷ್ಟು ದಕ್ಷಿಣ ಧ್ರುವದ ಹತ್ತಿರ ಹೋಗಿದ್ದೇವೆ. ಚಂದ್ರನ ದಕ್ಷಿಣ ಧ್ರುವವು ಸೂರ್ಯನಿಂದ ಕಡಿಮೆ ಪ್ರಕಾಶಮಾನ ಹೊಂದಿರುವ ಪ್ರದೇಶವಾಗಿದೆ. ಶಾಖ ಕಡಿಮೆ ಇರಲಿದೆ. ಬೆಳಕು ಕೂಡ ವಿರಳವಾಗಿರುತ್ತದೆ. ಹೀಗಿರುವುದಕ್ಕೆ ವೈಜ್ಞಾನಿಕವಾಗಿ ಹಲವು ಕಾರಣಗಳಿವೆ. ಒಂದು ನಿರ್ದಿಷ್ಟ ಪ್ರಯೋಜನ ಕೂಡ ಇದೆ. ಹೆಚ್ಚಿನ ವೈಜ್ಞಾನಿಕ ವಿಷಯ ತಿಳಿಯಲು ದಕ್ಷಿಣ ತುದಿ ಪ್ರಶಸ್ತವಾಗಿದೆ. ಜೊತೆಗೆ ಜಟಿಲ ಮತ್ತು ಕೌತುಕದಿಂದ ಕೂಡಿದ್ದರಿಂದ ಹೆಚ್ಚಿನ ಸಂಶೋಧನೆ ಮಾಡಲು ಈ ಪ್ರದೇಶ ಯೋಗ್ಯ ಸ್ಥಳವೆಂದು ವಿಜ್ಞಾನಿಗಳು ಕೂಡ ನಂಬಿದ್ದಾರೆ. ಭವಿಷ್ಯದಲ್ಲಿ ಮಾನವ ಅಲ್ಲಿಗೆ ಹೋಗಿ ತನ್ನ ಚಟುವಟಿಕೆಗಳನ್ನು ರಚಿಸಲೂಬಹುದು. ಹಾಗಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಚಂದ್ರನ ದಕ್ಷಿಣ ಧ್ರುವವನ್ನು ಆಯ್ಕೆ ಮಾಡಿಕೊಂಡು, ಅಲ್ಲಿಗೆ ನೌಕೆಯನ್ನು ಕಳುಹಿಸಿದೆವು" ಎಂದು ಸೋಮನಾಥ್ ಅವರು ವಿವರಣೆ ಕೊಟ್ಟಿದ್ದಾರೆ.