ಚೆನ್ನೈ:ಡಿಎಂಕೆ ಪಕ್ಷವನ್ನು ಹಿಂದು ವಿರೋಧಿ ಎಂದು ಬಿಜೆಪಿ ಬಿಂಬಿಸುತ್ತಿದೆ. ಸಂಘಪರಿವಾರ ಮತ್ತು ಬಿಜೆಪಿ ಸುಳ್ಳಿನ ಬಲೂನನ್ನು ಸತ್ಯದ ಸೂಜಿಯಿಂದ ಸಲೀಸಾಗಿ ಚುಚ್ಚಿ ಹೊಡೆದು ಹಾಕಬಹುದು ಎಂದು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಹೇಳಿದರು. ಪಕ್ಷದ ಸಾಮಾಜಿಕ ಮಾಧ್ಯಮ ಪಡೆಯನ್ನು ಉದ್ದೇಶಿಸಿ ಮಾತನಾಡಿದ ಸ್ಟಾಲಿನ್, ಬಿಜೆಪಿ ಸುಳ್ಳು ಹೇಳುವ ಮೂಲಕ ಪಕ್ಷವನ್ನು ಹಿಂದೂ ವಿರೋಧಿ ಎಂದು ಬಿಂಬಿಸುತ್ತಿದೆ. ಹೀಗಾಗಿ ಸುಳ್ಳಿನ ಬಲೂನನ್ನು ಸತ್ಯದ ಸೂಜಿಯಿಂದ ಚುಚ್ಚಿ, ಸತ್ಯವನ್ನು ಬಯಲು ಮಾಡಬೇಕು ಎಂದು ಸಲಹೆ ನೀಡಿದರು.
ಬಿಜೆಪಿ ಗೋಬೆಲ್ಸ್ಗಳ ತಂಡ:ಹಿಟ್ಲರ್‌ಗೆ ಒಬ್ಬ ಗೋಬೆಲ್ಸ್ ಇದ್ದ. ಆದರೆ, ಬಿಜೆಪಿಯಲ್ಲಿ ಎಲ್ಲರೂ ಗೋಬೆಲ್ಸ್‌ಗಳೇ. ಅವರು ತಮ್ಮ ಇಚ್ಛೆಯಂತೆ ಯಾರ ವಿರುದ್ಧವೂ ಅಪಪ್ರಚಾರ ಮಾಡುತ್ತಾರೆ. ಯಾವುದೇ ಪುರಾವೆಗಳಿಲ್ಲದೇ, ಯಾವುದೇ ಆಧಾರವಿಲ್ಲದೇ ಸುಳ್ಳುಗಳನ್ನು ಹರಡುತ್ತಾರೆ. ಅವರಿಗೆ ತಿಳಿದಿರುವುದು ವಾಟ್ಸ್ಆ್ಯಪ್ ವಿಶ್ವವಿದ್ಯಾನಿಲಯ ಮತ್ತು ಸಾಮಾಜಿಕ ಮಾಧ್ಯಮ. ಇವುಗಳಿಂದ ಅವರು ಎಲ್ಲ ಸುಳ್ಳುಗಳನ್ನು ಹಬ್ಬಿಸಿ ಸತ್ಯವನ್ನೇ ಮರೆಮಾಚುತ್ತಾರೆ ಎಂದು ಆರೋಪಿಸಿದರು.
ಅವರ ಸುಳ್ಳಿನ ಬಲೂನಿಗೆ ಸತ್ಯದ ಸೂಜಿ ಚುಚ್ಚಿದಾಗ ಅವರು ಕೆರಳುತ್ತಾರೆ. ಬಿಜೆಪಿ ಮತ್ತು ತಮಿಳು ಜನರ ಶತ್ರುಗಳಾದ ಎಐಎಡಿಎಂಕೆಯನ್ನು ಎದುರಿಸುತ್ತಿದ್ದೇವೆ. ನಮ್ಮ ಹೋರಾಟ ಫ್ಯಾಸಿಸಂ ವಿರುದ್ಧ. ಜನರನ್ನು ಕೋಮುವಾದ ಮತ್ತು ಜಾತೀಯತೆಯ ಆಧಾರದ ಮೇಲೆ ವಿಭಜಿಸುವ ಮೂಲಕ, ರಾಷ್ಟ್ರವನ್ನು ಧ್ವಂಸ ಮಾಡುವ ಗುಂಪಿನ ವಿರುದ್ಧ ನಮ್ಮ ಹೋರಾಟ. ಬಿಜೆಪಿಯ ಫ್ಯಾಸಿಸಂ ಡಿಎಂಕೆ ಅಥವಾ ತಮಿಳುನಾಡಿಗೆ ಮಾತ್ರವಲ್ಲ, ಇಡೀ ಭಾರತ ಮತ್ತು ವಿಶ್ವಕ್ಕೆ ಬೆದರಿಕೆಯಾಗಿದೆ ಎಂದು ದೂಷಿಸಿದರು.