ನವದೆಹಲಿ: ಭಾರತವು ಐದು ಟ್ರಿಲಿಯನ್ ಡಾಲರ್ ಆರ್ಥಿಕತೆಯತ್ತ ಮುನ್ನುಗ್ಗುತ್ತಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಇಂದು ಲೋಕಸಭೆಯಲ್ಲಿ 2023ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಿದ ನಂತರ ಅವರು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.
ಇದನ್ನೂ ಓದಿ:ಅಮೃತ ಕಾಲದ ಮೊದಲ ಬಜೆಟ್ ಮೂಲಕ ಅಭಿವೃದ್ಧಿ ಹೊಂದಿದ ಭಾರತ ನಿರ್ಮಾಣಕ್ಕೆ ಭದ್ರ ಅಡಿಪಾಯ: ಮೋದಿ
"ಗ್ರಾಹಕ ಬೆಲೆ ಸೂಚ್ಯಂಕ ಮತ್ತು ಸಗಟು ಬೆಲೆ ಸೂಚ್ಯಂಕ ಇಳಿಕೆಯಾಗುವ ಮೂಲಕ ಹಣದುಬ್ಬರ ನಿಯಂತ್ರಣದಲ್ಲಿದೆ. ವಾಸ್ತವ ಬೆಳವಣಿಗೆಗೆ ಅನುಗುಣವಾಗಿ ಹಣದುಬ್ಬರ ಆಧಾರಿತ ಕ್ರಮಗಳನ್ನು ಸರ್ಕಾರ ತೆಗೆದುಕೊಂಡಿದ್ದು ಫಲ ನೀಡಿದೆ" ಎಂದು ಸಚಿವೆ ತಿಳಿಸಿದರು. ಇದೇ ವೇಳೆ, "ಗೋಧಿಯನ್ನು ಮಾರುಕಟ್ಟೆಗೆ ಬಿಡಲು ಸರ್ಕಾರ ನಿರ್ಧರಿಸಿದ್ದು, ಇದರಿಂದ ಗೋಧಿ ಬೆಲೆ ಇಳಿಕೆಯಾಗಲಿದೆ. ಬಜೆಟ್‌ಗೂ ಮುನ್ನವೇ ಗೋಧಿ ಬೆಲೆ ತಗ್ಗಿಸಲು ಕ್ರಮ ಕೈಗೊಂಡಿದ್ದೆವು" ಎಂದು ಹೇಳಿದರು.
ನಾಲ್ಕು ಅಂಶಗಳಿಗೆ ಒತ್ತು: "ಬಜೆಟ್ನಲ್ಲಿ ನಾಲ್ಕು ಅಂಶಗಳಿಗೆ ಒತ್ತು ನೀಡಲಾಗಿದೆ. ಮಹಿಳಾ ಸಬಲೀಕರಣ, ಪ್ರವಾಸೋದ್ಯಮಕ್ಕೆ ಕ್ರಿಯಾ ಯೋಜನೆ, ವಿಶ್ವಕರ್ಮರಿಗೆ (ಕುಶಲ ಕರ್ಮಿಗಳು) ಉಪಕ್ರಮಗಳು ಮತ್ತು ಹಸಿರು ಬೆಳವಣಿಗೆ ಆದ್ಯತೆ ನೀಡಲಾಗಿದೆ" ಎಂದರು. "ಕೃಷಿ ಸಾಲ ಲಭ್ಯತೆಯಲ್ಲಿ ಸಾಕಷ್ಟು ಹೆಚ್ಚಳವಾಗಿದೆ. ಕೃಷಿ ಸಾಲವಾಗಿ 20 ಲಕ್ಷ ರೂ.ಗಳನ್ನು ನೀಡಲಾಗುತ್ತಿದೆ. ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿಯಲ್ಲಿ ಘೋಷಿಸಿರುವ ಉಪ ಯೋಜನೆಯು ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಪ್ರಯೋಜನವಾಗಲಿದೆ" ಎಂದು ತಿಳಿಸಿದರು.