ನಾಗ್ಪುರ( ಮಹಾರಾಷ್ಟ್ರ): ಬಡವರ ಕಲ್ಯಾಣಕ್ಕೆ ಯಾವುದೇ ಕಾನೂನು ಅಡ್ಡಿಯಾಗುವುದಿಲ್ಲ. ಮಹಾತ್ಮಾ ಗಾಂಧೀಜಿಯವರು ಬಡವರ ಕಲ್ಯಾಣಕ್ಕಾಗಿ 10 ಬಾರಿ ಕಾನೂನನ್ನು ಮುರಿಯಬೇಕಾದರೂ ಅದನ್ನು ಮಾಡಿ ಎಂದು ಹೇಳಿದ್ದರು. ಹೀಗಾಗಿ ಜನರ ಅನುಕೂಲಕ್ಕಾಗಿ ಕಾನೂನು ಮುರಿಯುವ ಹಕ್ಕು ನಮಗಿದೆ ಎಂದು ಕೇಂದ್ರ ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ನಾವು ಮಂತ್ರಿಗಳು ಹಾಗಾಗಿ ಕಾನೂನು ಉಲ್ಲಂಘಿಸುವ ಹಕ್ಕು ನಮಗಿದೆ ಎಂದು ಹೇಳುವ ಮೂಲಕ ಕೇಂದ್ರ ಸಚಿವರು ಅಚ್ಚರಿ ಮೂಡಿಸಿದ್ದಾರೆ. ಅವರು ಮಹಾರಾಷ್ಟ್ರ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ನಾಗ್ಪುರ ಶಾಖೆಯಿಂದ ಬುಡಕಟ್ಟು ಜನಾಂಗದವರ ಆರೋಗ್ಯಕ್ಕಾಗಿ ಬ್ಲಾಸಮ್ ಎಂಬ ಯೋಜನೆ ಉದ್ಘಾಟಿಸಿ ಮಾತನಾಡುವಾಗ ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘ಹೌದು ಸಾರ್’ ಎಂದು ಹೇಳುವ ಮೂಲಕ ಅಧಿಕಾರಿಗಳು ನಾವು ಹೇಳುವುದನ್ನು ಅನುಸರಿಸಬೇಕು. ಅಧಿಕಾರಿಗಳ ಹಿತದಿಂದ ಸರ್ಕಾರ ನಡೆಯುತ್ತಿಲ್ಲ ಜನರ ಮತದಿಂದ ಆಡಳಿತ ನಡೆಯುತ್ತಿದೆ. 1995ರಲ್ಲಿ ಮನೋಹರ ಜೋಶಿ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಗಡ್ಚಿರೋಲಿ ಮತ್ತು ಮೇಲ್ಘಾಟ್‌ನಲ್ಲಿ ಅಪೌಷ್ಟಿಕತೆಯಿಂದ ಎರಡು ಸಾವಿರ ಬುಡಕಟ್ಟು ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು.