ಕೋಲ್ಕತ್ತಾ (ಪಶ್ಚಿಮ ಬಂಗಾಳ):ಬಿರುಸಿನ ತಿಕ್ಕಾಟಕ್ಕೆ ಕಾರಣವಾಗಿರುವ ಪಶ್ಚಿಮಬಂಗಾಳ ಗ್ರಾಮ ಪಂಚಾಯತ್ ಚುನಾವಣೆಗೆ ಇಂದು ಬೆಳಗ್ಗೆ ಮತದಾನ ಆರಂಭವಾಗಿದ್ದು, ಕಟ್ಟುನಿಟ್ಟಿನ ಭದ್ರತೆಯ ನಡುವೆಯೂ ಕೆಲವೆಡೆ ಹಿಂಸಾಚಾರ ನಡೆದಿದೆ. ಬಿಜೆಪಿ ಮತ್ತು ಟಿಎಂಸಿ ಕಾರ್ಯಕರ್ತರ ಮಧ್ಯೆ ಹೊಡೆದಾಟ ನಡೆದಿದ್ದು, ಮೂವರು ಟಿಎಂಸಿ ಕಾಯಕರ್ತರನ್ನು ಹತ್ಯೆ ಮಾಡಲಾಗಿದೆ ಎಂದು ಟಿಎಂಸಿ ಟ್ವೀಟ್ ಮೂಲಕ ಆರೋಪಿಸಿದೆ. ಇನ್ನೊಂದೆಡೆ ಕೂಚ್‌ಬೆಹಾರ್‌ನ ಸೀತಾಯ್‌ನಲ್ಲಿರುವ ಬಾರವಿತಾ ಪ್ರಾಥಮಿಕ ಶಾಲೆಯಲ್ಲಿ ಮತಗಟ್ಟೆಯನ್ನು ಧ್ವಂಸಗೊಳಿಸಿ, ಮತಪತ್ರಗಳಿಗೆ ಬೆಂಕಿ ಹಚ್ಚಿರುವ ಘಟನೆ ನಡೆದಿದೆ.
ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ರಾಜ್ಯದ ಹಲವೆಡೆ ತೀವ್ರ ಹಿಂಸಾಚಾರದ ಘಟನೆಗಳು ವರದಿಯಾಗಿದ್ದವು. ಇದಾದ ನಂತರವೂ ಮತದಾನ ದಿನವಾದ ಇಂದು ಕೂಡ ಅಂಥದ್ದೇ ಘಟನೆಗಳು ನಡೆದಿವೆ. ಮತದಾನಕ್ಕೆ ಕೆಲವೇ ಗಂಟೆಗಳ ಮೊದಲು ಮುರ್ಷಿದಾಬಾದ್‌ನಲ್ಲಿ ಶುಕ್ರವಾರ ರಾತ್ರಿ ಟಿಎಂಸಿ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದು, ಮನೆಯೊಂದನ್ನು ಧ್ವಂಸ ಮಾಡಲಾಗಿದೆ.
ಟಿಎಂಸಿ ಟ್ವೀಟ್:'ರೆಜಿನಗರ, ತುಫಂಗಂಜ್ ಮತ್ತು ಖಾರ್‌ಗ್ರಾಮ್‌ನಲ್ಲಿ ನಮ್ಮ ಪಕ್ಷದ ಮೂವರು ಕಾರ್ಯಕರ್ತರನ್ನು ಹತ್ಯೆ ಮಾಡಲಾಗಿದೆ. ಡೊಮ್‌ಕೋಲ್‌ನಲ್ಲಿ ಇಬ್ಬರು ಗುಂಡೇಟಿನಿಂದ ಗಾಯಗೊಂಡಿದ್ದಾರೆ. ಬಿಜೆಪಿ, ಸಿಪಿಐ(ಎಂ) ಮತ್ತು ಕಾಂಗ್ರೆಸ್ ಪಕ್ಷಗಳು ಹಿಂಸಾಚಾರ ನಡೆಸುತ್ತಿವೆ. ಚುನಾವಣೆಯ ಹಿನ್ನೆಲೆ ಕೇಂದ್ರ ಪಡೆಗಳನ್ನು ರಾಜ್ಯದಲ್ಲಿ ನಿಯೋಜನೆ ಮಾಡಲಾಗಿದ್ದರೆ, ಅವುಗಳು ಈಗ ಎಲ್ಲಿವೆ' ಎಂದು ಪ್ರಶ್ನಿಸಿ ಟಿಎಂಸಿ ಅಧಿಕೃತ ಟ್ವಿಟರ್ನಲ್ಲಿ ಪ್ರಶ್ನೆ ಮಾಡಲಾಗಿದೆ.
'ಕೇಂದ್ರ ಪಡೆಗಳ ಭದ್ರತೆ ಮಧ್ಯೆಯೂ ಸಾವಿನ ಸಂಖ್ಯೆ ಹೆಚ್ಚುತ್ತಿವೆ. ಮಾಲ್ಡಾದ ಮಾಣಿಕ್‌ಚಕ್‌ನಲ್ಲಿ ಬಾಂಬ್ ದಾಳಿಯ ನಡೆಸಲಾಗಿದೆ. ಇದು ನಮ್ಮ ಪಕ್ಷದ ಕಾರ್ಯಕರ್ತನನ್ನು ಬಲಿ ತೆಗೆದುಕೊಂಡಿದೆ. ನಾಡಿಯಾದ ನಾರಾಯಣಪುರ ಗ್ರಾಮ ಪಂಚಾಯತಿ ಅಭ್ಯರ್ಥಿ ಹಸೀನಾ ಸುಲ್ತಾನ್ ಅವರ ಪತಿಯ ಮೇಲೆ ಗುಂಡು ಹಾರಿಸಲಾಗಿದೆ. ಮತದಾನ ಆರಂಭವಾಗುವ ಕೆಲವೇ ಕ್ಷಣಗಳ ಮೊದಲು ಕಚ್ಚಾ, ದೇಶಿ ನಿರ್ಮಿತ ಬಾಂಬ್‌ಗಳನ್ನು ನಮ್ಮ ಕಾರ್ಯಕರ್ತರ ಮೇಲೆ ಎಸೆಯಲಾಗಿದೆ' ಎಂದು ಟ್ವೀಟ್ನಲ್ಲಿ ಆರೋಪಿಸಲಾಗಿದೆ.