ಕರ್ನಾಟಕ

karnataka

By

Published : Jul 8, 2023, 1:05 PM IST

ETV Bharat / bharat

WB Panchayat polls: ಪಶ್ಚಿಮಬಂಗಾಳ ಚುನಾವಣೆಯಲ್ಲಿ ಭಾರೀ ಹಿಂಸಾಚಾರ: 9 ಮಂದಿ ಸಾವು, ಮತಗಟ್ಟೆಗಳು ಧ್ವಂಸ, ಬೆಂಕಿ

ಪಶ್ಚಿಮಬಂಗಾಳದಲ್ಲಿ ನಡೆಯುತ್ತಿರುವ ಪಂಚಾಯತ್​ ಚುನಾವಣೆಯಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಕಾಂಗ್ರೆಸ್, ಟಿಎಂಸಿ, ಬಿಜೆಪಿ ಕಾರ್ಯಕರ್ತರ ಮಧ್ಯೆ ಮಾರಾಮಾರಿ ನಡೆದು ಸಾವುಗಳು ಸಂಭವಿಸಿವೆ.

ಪಶ್ಚಿಮಬಂಗಾಳ ಚುನಾವಣೆಯಲ್ಲಿ ಭಾರೀ ಹಿಂಸಾಚಾರ
ಪಶ್ಚಿಮಬಂಗಾಳ ಚುನಾವಣೆಯಲ್ಲಿ ಭಾರೀ ಹಿಂಸಾಚಾರ

ಕೋಲ್ಕತ್ತಾ:ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಪಂಚಾಯತ್ ಚುನಾವಣೆ ಮತದಾನದ ವೇಳೆ ನಡೆದ ಸಂಘರ್ಷದಲ್ಲಿ 9 ಮಂದಿ ಕಾರ್ಯಕರ್ತರು ಸಾವನ್ನಪ್ಪಿದ್ದಾರೆ. ಮೂರು ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಮೊದಲ ಹಂತದ ಮತದಾನದಲ್ಲಿ ಹಿಂಸಾಚಾರ ಭುಗಿಲೆದ್ದಿದೆ.

ಹಿಂಸಾಚಾರದಲ್ಲಿ ಮೃತಪಟ್ಟವರ ಪೈಕಿ ಐವರು ಟಿಎಂಸಿ ಸದಸ್ಯರಾಗಿದ್ದರೆ, ಬಿಜೆಪಿ, ಸಿಪಿಐ(ಎಂ) ಮತ್ತು ಕಾಂಗ್ರೆಸ್‌ನ ತಲಾ ಒಬ್ಬ ಕಾರ್ಯಕರ್ತ ಮತ್ತು ಸ್ವತಂತ್ರ ಅಭ್ಯರ್ಥಿಯ ಬೆಂಬಲಿಗನೊಬ್ಬ ಪ್ರಾಣ ಕಳೆದುಕೊಂಡಿದ್ದಾನೆ. ಹಿಂಸಾತ್ಮಕ ಘರ್ಷಣೆಯಲ್ಲಿ ಹಲವಾರು ಮಂದಿ ಗಾಯಗೊಂಡಿದ್ದಾರೆ. ಎರಡು ಮತಗಟ್ಟೆಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದರು.

ಗವರ್ನರ್ ಸಿವಿ ಆನಂದ ಬೋಸ್ ಉತ್ತರ 24 ಪರಗಣ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದರು. ಹಿಂಸಾಚಾರದಲ್ಲಿ ಗಾಯಗೊಂಡ ಜನರನ್ನು ಭೇಟಿ ಮಾಡಿದರು. ಮತದಾರರೊಂದಿಗೆ ಸಂವಾದ ನಡೆಸಿದರು.

ಕೂಚ್‌ಬಿಹಾರ್ ಜಿಲ್ಲೆಯ ಫಲಿಮಾರಿ ಗ್ರಾಮ ಪಂಚಾಯಿತಿಯಲ್ಲಿ ಬಿಜೆಪಿ ಮತಗಟ್ಟೆ ಏಜೆಂಟ್ ಆಗಿದ್ದ ಮಾಧಬ್ ಬಿಸ್ವಾಸ್​ರನ್ನು ಹತ್ಯೆ ಮಾಡಲಾಗಿದೆ. ಬಿಸ್ವಾಸ್ ಮತಗಟ್ಟೆ ಪ್ರವೇಶಿಸುತ್ತಿದ್ದಾಗ, ಟಿಎಂಸಿ ಬೆಂಬಲಿಗರು ತಡೆದರು. ಈ ವೇಳೆ ನಡೆದ ಕಾದಾಟದಲ್ಲಿ ಬಿಸ್ವಾಸ್​​ ಹತ್ಯೆಯಾಗಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಉತ್ತರ 24 ಪರಗಣ ಜಿಲ್ಲೆಯ ಕದಂಬಗಚಿ ಪ್ರದೇಶದಲ್ಲಿ ಸ್ವತಂತ್ರ ಅಭ್ಯರ್ಥಿಯ ಬೆಂಬಲಿಗನೊಬ್ಬನನ್ನು ಥಳಿಸಿ ಹತ್ಯೆ ಮಾಡಲಾಗಿದೆ. ಮುರ್ಷಿದಾಬಾದ್ ಜಿಲ್ಲೆಯ ಕಪಾಸ್‌ದಂಗ ಪ್ರದೇಶದಲ್ಲಿ ಶುಕ್ರವಾರ ರಾತ್ರಿ ನಡೆದ ಹಿಂಸಾಚಾರದಲ್ಲಿ ಟಿಎಂಸಿ ಕಾರ್ಯಕರ್ತ ಸಾವನ್ನಪ್ಪಿದ್ದಾನೆ. ಇದಲ್ಲದೇ, ಖಾರ್‌ಗ್ರಾಮ್ ಪ್ರದೇಶದ ಸಾಬಿರುದ್ದೀನ್, ಕೂಚ್ ಬೆಹಾರ್‌ನ ತುಫಂಗಂಜ್​ನ ಗಣೇಶ್ ಸರ್ಕಾರ್, ಮಾಲ್ಡಾ ಜಿಲ್ಲೆಯಲ್ಲಿ ಮಾಲೆಕ್ ಶೇಖ್, ಚಾಪ್ರಾದಲ್ಲಿ ಓರ್ವ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ ಎಂದು ಟಿಎಂಸಿ ಆರೋಪಿಸಿದೆ. ಜೊತೆಗೆ ಚುನಾವಣೆ ಸಂಬಂಧಿತ ಹಿಂಸಾಚಾರದಲ್ಲಿ ಮುರ್ಷಿದಾಬಾದ್‌ನ ರೆಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತನನ್ನು ಹತ್ಯೆ ಮಾಡಲಾಗಿದೆ.

ಮತಗಟ್ಟೆ ಧ್ವಂಸ:ಕೆಲವೆಡೆ ಮತಪೆಟ್ಟಿಗೆಗಳನ್ನು ಧ್ವಂಸಗೊಳಿಸಿ ಮತದಾರರನ್ನು ಬೆದರಿಸಿದ ಘಟನೆಗಳೂ ವರದಿಯಾಗಿವೆ. ಕೂಚ್ ಬೆಹಾರ್ ಜಿಲ್ಲೆಯ ದಿನಾಟಾ, ಬಾರಾವಿಟಾ ಸರ್ಕಾರಿ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತಪೆಟ್ಟಿಗೆಗಳನ್ನು ಧ್ವಂಸಗೊಳಿಸಲಾಗಿದೆ. ಬಳಿಕ ಮತಪತ್ರಗಳಿಗೆ ಬೆಂಕಿ ಹಚ್ಚಲಾಗಿದೆ. ಬಾರ್ನಾಚಿನಾ ಪ್ರದೇಶದ ಮತಗಟ್ಟೆಯಲ್ಲಿ ನಕಲಿ ಮತದಾನ ಮಾಡಲಾಗಿದೆ ಎಂದು ಆರೋಪಿಸಿ ಮತಪೆಟ್ಟಿಗೆಗೆ ಬೆಂಕಿ ಹಚ್ಚಲಾಗಿದೆ.

ಪಶ್ಚಿಮ ಬಂಗಾಳದ ಗ್ರಾಮೀಣ ಪ್ರದೇಶದ 73,887 ಕ್ಷೇತ್ರಗಳಲ್ಲಿ ಶನಿವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, 5.67 ಕೋಟಿ ಜನರು ಸುಮಾರು 2.06 ಲಕ್ಷ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

ಇದನ್ನೂ ಓದಿ:WB Panchayat polls: ಪಂಚಾಯತ್​ ಚುನಾವಣೆ: ಮತದಾನದ ವೇಳೆ ಹಿಂಸಾಚಾರ, ಮೂವರು ಟಿಎಂಸಿ ಕಾರ್ಯಕರ್ತರ ಹತ್ಯೆ ಆರೋಪ

ABOUT THE AUTHOR

...view details