ನೋಯ್ಡಾ(ಉತ್ತರಪ್ರದೇಶ) :ಸಿನಿಮಾಗಳ ಹೀರೋಗಳು ಸ್ಟಂಟ್ ಮಾಡಿದಂತೆ ತಾವೂ ಮಾಡಲು ಹೋಗಿ ಯುವಕರು ಏನೆಲ್ಲಾ ಸಂಕಷ್ಟಗಳಿಗೆ ಸಿಲುಕುತ್ತಾರೆ. ಹೈದರಾಬಾದ್ನ ಯುವಕನೊಬ್ಬ ರಾಕಿ ಬಾಯ್ನಂತೆ ಸಿಗರೇಟ್ನ ಇಡೀ ಪ್ಯಾಕ್ ಸೇದಿ ಆಸ್ಪತ್ರೆ ಪಾಲಾದರೆ, ಶಕ್ತಿಮಾನ್ ರೀತಿ ಸ್ಟಂಟ್ ಮಾಡಲು ಹೋಗಿ ಉತ್ತರಪ್ರದೇಶ ಯುವಕ ಜೈಲು ಪಾಲಾಗಿದ್ದಾನೆ.
90ರ ದಶಕದಲ್ಲಿ ಬಂದ ಸೂಪರ್ ಹೀರೋ ಮಾದರಿಯ 'ಶಕ್ತಿಮಾನ್' ಗಾಳಿಯಲ್ಲಿ ಹಾರುವುದು ಭಾರೀ ಖ್ಯಾತಿ ಪಡೆದಿತ್ತು. ಅದೇ ರೀತಿಯಾಗಿಯೇ ಉತ್ತರಪ್ರದೇಶದ ನೋಯ್ಡಾದ ಯುವಕನೊಬ್ಬ ಬೈಕ್ ಮೇಲೆ ಮಲಗಿ ಗಾಳಿಯಲ್ಲಿ ತೇಲುವಂತೆ ಸ್ಟಂಟ್ ಮಾಡಿದ ವಿಡಿಯೋ ವೈರಲ್ ಆಗಿದೆ.
ಯುವಕ ಬೈಕ್ ಮೇಲೆ ಸ್ಟಂಟ್ ಮಾಡುವುದನ್ನು ಅವನ ಸ್ನೇಹಿತರು ಚಿತ್ರೀಕರಣ ಮಾಡಿದ್ದರು. ರಸ್ತೆಯ ಮೇಲೆ ಅಪಾಯಕಾರಿ ಸ್ಟಂಟ್ ಮಾಡಿದ ಯುವಕ ಮತ್ತು ಆತನ ಸ್ನೇಹಿತರ ಮೇಲೆ ಕೇಸ್ ಜಡಿದ ಪೊಲೀಸರು ಜೈಲಿಗಟ್ಟಿದ್ದಾರೆ.