ರಾಜನಂದಗಾಂವ್, ಛತ್ತೀಸ್‌ಗಢ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಮತ್ತೊಮ್ಮೆ ಎಡವಟ್ಟು ಮಾಡಿಕೊಂಡಿದ್ದಾರೆ. ಜಿಲ್ಲೆಯಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದ ರಾಹುಲ್ ಗಾಂಧಿ ಟಂಗ್ ಸ್ಲಿಪ್ ಮಾಡಿದ್ದಾರೆ. ಸಿಎಂ ಬಘೇಲ್ ಅವರು ಅದಾನಿ ಪರ ಕೆಲಸ ಮಾಡುವ ವ್ಯಕ್ತಿ ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ಎಡವಟ್ಟು ಮಾಡಿದ್ದಾರೆ. ಸದ್ಯ ರಾಹುಲ್ ಗಾಂಧಿಯವರ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗ್ತಿದ್ದು, ಈ ಕುರಿತು ಬಿಜೆಪಿಯಿಂದ ಟ್ವೀಟ್‌ಗಳ ಸುರಿಮಳೆಯೇ ಹರಿಯುತ್ತಿದೆ.
‘ಅದಾನಿಗಾಗಿ ಕೆಲಸ ಮಾಡುವ ಸಿಎಂ’: ಚುನಾವಣಾ ರ್‍ಯಾಲಿ ಉದ್ದೇಶಿಸಿ ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಬಿಜೆಪಿ ಶ್ರೀಮಂತರ ಸೇವೆ ಮಾಡುತ್ತಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಅದಾನಿಗಾಗಿ 24 ಗಂಟೆಗಳ ಕಾಲ ಕೆಲಸ ಮಾಡುತ್ತಾರೆ. ಅದೇ ರೀತಿ ಇಲ್ಲಿನ ನಿಮ್ಮ ಮುಖ್ಯಮಂತ್ರಿ ಕೂಡ ಅದಾನಿಯವರಿಗಾಗಿ 24 ಗಂಟೆ ಕೆಲಸ ಮಾಡುತ್ತಾರೆ. ಆದರೆ, ಕಾಂಗ್ರೆಸ್ ಪಕ್ಷವು ರೈತರು ಮತ್ತು ಕಾರ್ಮಿಕರಿಗಾಗಿ ಕೆಲಸ ಮಾಡುತ್ತಿದೆ ಎಂದು ಬಣ್ಣಿಸಿದರು. ರಾಹುಲ್ ಗಾಂಧಿಯವರ ಈ ಭಾಷಣದ ನಂತರ ವೇದಿಕೆಯಲ್ಲಿದ್ದ ಸಿಎಂ ಭೂಪೇಶ್ ಬಘೇಲ್ ಮತ್ತು ಇತರ ಕಾಂಗ್ರೆಸ್ ನಾಯಕರು ಆಶ್ಚರ್ಯಚಕಿತರಾದರು. ಮುಂದೇ ಏನು ಮಾಡಬೇಕೆಂದು ತಿಳಿಯದೇ ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾದರು.
ಕಾಂಗ್ರೆಸ್ ವಿರುದ್ಧ ಬಿಜೆಪಿ ವಾಗ್ದಾಳಿ: ಈ ಸಂಪೂರ್ಣ ವಿಚಾರದಲ್ಲಿ ಬಿಜೆಪಿ ನಾಯಕರು ವ್ಯಂಗ್ಯವಾಡಿದ್ದಾರೆ. ಬಿಜೆಪಿ ನಾಯಕರು ಕಾಂಗ್ರೆಸ್‌ನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ರಾಹುಲ್ ಗಾಂಧಿಯವರ ಈ ಹೇಳಿಕೆಯ ಆಧಾರದ ಮೇಲೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವಿಯಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.