ಕರ್ನಾಟಕ

karnataka

ETV Bharat / bharat

25 ಕೋಟಿ ಜನರು ಬಡತನ ಮುಕ್ತರಾಗಿದ್ದು ವಿಕಸಿತ ಭಾರತದ ಸಂಕೇತ: ಪ್ರಧಾನಿ ಮೋದಿ - ಕೇರಳಕ್ಕೆ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಕೇರಳ ಪ್ರವಾಸ ಕೈಗೊಂಡಿದ್ದಾರೆ. ಇಂದು ಅವರು ಇಲ್ಲಿನ ಶ್ರೀಕೃಷ್ಣ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಪ್ರಧಾನಿ ಮೋದಿ
ಪ್ರಧಾನಿ ಮೋದಿ

By ETV Bharat Karnataka Team

Published : Jan 17, 2024, 6:28 PM IST

ತ್ರಿಶೂರ್ (ಕೇರಳ):ಎರಡು ದಿನಗಳ ಕೇರಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಗುರುವಾಯೂರಿನಲ್ಲಿರುವ ಪ್ರಸಿದ್ಧ ಶ್ರೀಕೃಷ್ಣ ದೇವಸ್ಥಾನಕ್ಕೆ ಬುಧವಾರ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಬಳಿಕ ಇಲ್ಲಿಯೇ ಹಮ್ಮಿಕೊಂಡಿದ್ದ ನಟ ಮತ್ತು ಮಾಜಿ ಸಂಸದ ಸುರೇಶ್ ಗೋಪಿ ಅವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಪಾಲ್ಗೊಂಡು ನವ ದಂಪತಿಗೆ ಶುಭ ಕೋರಿದರು.

ಕೇರಳದ ಸಾಂಪ್ರದಾಯಿಕ ಉಡುಗೆಯಾದ ಬಿಳಿ ಅಂಗಿ, ಪಂಚೆಯಲ್ಲಿದ್ದ ಪ್ರಧಾನಿ ಮೋದಿ ಶ್ರೀಕೃಷ್ಣನ ಸನ್ನಿಧಿಗೆ ಮೊದಲು ಭೇಟಿ ನೀಡಿದರು. ಇಲ್ಲಿಗೆ ಬಂದ ಪ್ರಧಾನಿಗೆ ದೇವಸ್ಥಾನದ ಪದಾಧಿಕಾರಿಗಳು ಪೂರ್ಣಕುಂಭದ ಸ್ವಾಗತ ನೀಡಿದರು. ಇಲ್ಲಿಗೆ ಬರುವ ಅತಿಥಿಗಳಿಗೆ ಸ್ವಾಗತಿಸುವ ಸಾಂಪ್ರದಾಯಿಕ ವಿಧಾನ ಇದಾಗಿದೆ. ಅಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ, ಮಾಜಿ ಸಂಸದರ ಪುತ್ರಿಯ ವಿವಾಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹರಸಿದರು.

ಈ ಸಂದರ್ಭದಲ್ಲಿ ಮೋಹನ್ ಲಾಲ್, ಮಮ್ಮುಟ್ಟಿ, ಜಯರಾಮ್ ಮತ್ತು ದಿಲೀಪ್ ಸೇರಿದಂತೆ ಮಲಯಾಳಂ ಚಿತ್ರರಂಗದ ಪ್ರಮುಖ ನಟರು ಇದ್ದರು. ಅವರೊಂದಿಗೆ ಪ್ರಧಾನಿ ಕೆಲಕಾಲ ಸಂವಾದ ನಡೆಸಿದರು.

ಇದಕ್ಕೂ ಮುನ್ನ ಮಂಗಳವಾರ ರಾತ್ರಿ ಕೇರಳಕ್ಕೆ ಆಗಮಿಸಿದ ಪ್ರಧಾನಿ ಅವರನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್, ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕೇಂದ್ರ ಸಚಿವ ವಿ ಮುರಳೀಧರನ್ ಮತ್ತು ಬಿಜೆಪಿ ನಾಯಕ ಪ್ರಕಾಶ್ ಜಾವಡೇಕರ್ ಅವರು ಕೊಚ್ಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದ್ದರು.

ಸರ್ಕಾರದ ವಿರುದ್ಧ ಟೀಕೆ:ಕೊಚ್ಚಿಯಲ್ಲಿ ಹಮ್ಮಿಕೊಂಡಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ ಅವರು ಕೇರಳ ಸರ್ಕಾರದ ವಿರುದ್ಧ ಕೇಳಿಬಂದಿರುವ ಹಗರಣಗಳನ್ನು ಪ್ರಸ್ತಾಪಿಸಿ ಟೀಕಿಸಿದರು. ಕಳೆದ 9 ವರ್ಷಗಳಲ್ಲಿ ಸುಮಾರು 25 ಕೋಟಿ ಜನರು ಬಡತನದಿಂದ ಮುಕ್ತರಾಗಿದ್ದಾರೆ. ಆದರೆ, ಐದು ದಶಕಗಳಿಂದ ಕಾಂಗ್ರೆಸ್ ಕೇವಲ 'ಗರೀಬಿ ಹಠಾವೋ' ಘೋಷಣೆಯನ್ನು ಮಾತ್ರ ಮಾಡುತ್ತಿತ್ತು. ದೇಶ ಅಭಿವೃದ್ಧಿ ಪಥದತ್ತ ಸಾಗುತ್ತಿರುವುದು ವಿಕಸಿತ ಮಾರ್ಗಕ್ಕೆ ಸಾಕ್ಷಿಯಾಗಿದೆ ಎಂದರು.

ಎಲ್‌ಡಿಎಫ್ (ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್), ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ಭ್ರಷ್ಟಾಚಾರ ಮತ್ತು ಹಗರಣಗಳ ಇತಿಹಾಸವೇ ಹೊಂದಿವೆ. ಇಲ್ಲಿನ ಸರ್ಕಾರ ಅಭಿವೃದ್ಧಿಗಿಂತ ಹಣ ಲೂಟಿ ಮಾಡಿದ್ದೇ ಹೆಚ್ಚು ಎಂದು ಆರೋಪಿಸಿದರು.

ತ್ರಿಶೂರ್‌ನಲ್ಲಿ ನಡೆದ ನಾರಿ ಶಕ್ತಿ ಸಮ್ಮೇಳನದಲ್ಲಿ ಕೇರಳ ಬಿಜೆಪಿ ಪಕ್ಷದ ಕಾರ್ಯಕರ್ತರ ಸಾಮರ್ಥ್ಯವನ್ನು ನಾವು ನೋಡಿದ್ದೇವೆ. ಬಲಿಷ್ಠ ಸಂಘಟನೆಯಿಂದ ಮಾತ್ರ ಇಂತಹ ಬೃಹತ್ ಸಮಾವೇಶವನ್ನು ನಡೆಸಬಹುದು. ಪ್ರಯತ್ನ, ವೇಗದ ಅಭಿವೃದ್ಧಿ ಮತ್ತು ಭವಿಷ್ಯದ ದೃಷ್ಟಿಕೋನವನ್ನು ಹೊಂದಿರುವ ಏಕೈಕ ರಾಜಕೀಯ ಪಕ್ಷ ಬಿಜೆಪಿಯಾಗಿದೆ ಎಂದು ಅವರು ಹೇಳಿದರು.

ರಾಜ್ಯದಲ್ಲಿ ಬಿಜೆಪಿಯನ್ನು ಬಲಪಡಿಸಲು ಶ್ರಮಿಸುತ್ತಿರುವ ಬಿಜೆಪಿ ಕಾರ್ಯಕರ್ತರೊಂದಿಗೆ ಸೇರುವುದು ನನಗೆ ಯಾವಾಗಲೂ ಸಂತೋಷದ ಕ್ಷಣವಾಗಿದೆ. ಹಲವು ಅಡ್ಡಿ ಆತಂಕಗಳ ಜೊತೆಗೆ ಪಕ್ಷದ ಕಾರ್ಯಕರ್ತರು ಪಕ್ಷವನ್ನು ಕಟ್ಟುತ್ತಿದ್ದಾರೆ. ಇದು ಅವರ ಸಿದ್ಧಾಂತ ಮತ್ತು ದೇಶಭಕ್ತಿಗೆ ಸಾಕ್ಷಿಯಾಗಿದೆ ಎಂದು ಪ್ರಧಾನಿ ಹೇಳಿದರು.

ಇದನ್ನೂ ಓದಿ:ಮೋದಿ ನಿದ್ರೆ ಸುಖ ಅರಿಯದ ತಪಸ್ವಿ ಆಡಳಿತಗಾರ,ಸಿದ್ದರಾಮಯ್ಯರದ್ದು ವಿಕೃತ ಆನಂದ: ಬಿಜೆಪಿ ನಾಯಕರ ತಿರುಗೇಟು

ABOUT THE AUTHOR

...view details