ಬೆಂಗಳೂರು: ಚಂದ್ರಯಾನ 3 ದಕ್ಷಿಣ ಧ್ರುವದಲ್ಲಿ ಸುರಕ್ಷಿತವಾಗಿ ಇಳಿಯುವ ಮೂಲಕ ಭಾರತ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಇತಿಹಾಸ ಬರೆದಿದೆ. ಚಂದ್ರಯಾನ 3 ಲ್ಯಾಂಡರ್ ಈ ತಿಂಗಳ 23 ರಂದು ಸಂಜೆ 6.04 ಕ್ಕೆ ಯಶಸ್ವಿಯಾಗಿ ಚಂದ್ರನ ಮೇಲೆ ಇಳಿಯಿತು. ಕೆಲವು ಗಂಟೆಗಳ ನಂತರ ರೋವರ್ ಅದರಿಂದ ಹೊರಬಂದು ತನ್ನ ಅಧ್ಯಯನವನ್ನು ಪ್ರಾರಂಭಿಸಿತು. ಈ ಹಿನ್ನೆಲೆಯಲ್ಲಿ ಇಸ್ರೋ ಇತ್ತೀಚೆಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ. ರೋವರ್ ಲ್ಯಾಂಡರ್‌ನಿಂದ ಹೊರ ಬರುವ ಮತ್ತು ಚಂದ್ರ ಮೇಲೆ ಇಳಿಯುವ ದೃಶ್ಯಗಳನ್ನು ಹಂಚಿಕೊಂಡಿದ್ದಾರೆ.
ಇಸ್ರೋ ಗುರುವಾರ ಮತ್ತೊಂದು ವಿಡಿಯೋ ಶೇರ್ ಮಾಡಿದ್ದು ಗೊತ್ತೇ ಇದೆ. ವಿಕ್ರಮ ಲ್ಯಾಂಡರ್ ಚಂದ್ರನನ್ನು ಸ್ಪರ್ಶಿಸುವ ಮುಂಚೆ ಸೆರೆಹಿಡಿದ ಅಂತಿಮ ಕ್ಷಣಗಳ ಚಿತ್ರಗಳ ವಿಡಿಯೋವನ್ನು ಇಸ್ರೋ ಹಂಚಿಕೊಂಡಿತ್ತು. ಮತ್ತೊಂದು ಟ್ವೀಟ್ನಲ್ಲಿ, ''ಚಂದ್ರನನ್ನು ಸ್ಪರ್ಶಿಸುವ ಸ್ವಲ್ಪ ಸಮಯಕ್ಕೂ ಮೊದಲು ಲ್ಯಾಂಡರ್ ಇಮೇಜರ್ ಕ್ಯಾಮರಾ ಚಂದ್ರನ ಚಿತ್ರವನ್ನು ಹೇಗೆ ಸೆರೆಹಿಡಿದಿದೆ ಎಂಬುದು ಇಲ್ಲಿದೆ'' ಎಂದು ವಿಡಿಯೋ ತುಣುಕನ್ನು ಇಸ್ರೋ ಪೋಸ್ಟ್ ಮಾಡಿತ್ತು. ಈ ವಿಡಿಯೋ ಸುಮಾರು 2 ನಿಮಿಷ ಮತ್ತು 17 ಸೆಕೆಂಡುಗಳು ಇದೆ.
'ಚಂದ್ರಯಾನ -3 ಮಿಷನ್‌ನ ಎಲ್ಲ ಚಟುವಟಿಕೆಗಳು ಸರಿಯಾಗಿ ಸಾಗುತ್ತಿವೆ'' ಎಂದು ಈ ಹಿಂದೆ ಇಸ್ರೋ ಟ್ವೀಟ್ ಮಾಡಿತ್ತು. ಲ್ಯಾಂಡರ್ ಮಾಡ್ಯೂಲ್ ಉಪಕರಣಗಳಾದ ಎಲ್ಐಎಸ್ಎ (ILSA), ರಂಭಾ (RAMBHA) ಮತ್ತು ಚೇಸ್ಟ್ (ChaSTE) ಕಾರ್ಯಾರಂಭ ಮಾಡಿವೆ. ರೋವರ್ ಮೊಬಿಲಿಟಿ ಕಾರ್ಯಾಚರಣೆಗಳೂ ಸಹ ಪ್ರಾರಂಭವಾಗಿವೆ'' ಎಂದು ತಿಳಿಸಿದೆ. ಇದೇ ವೇಳೆ, ಪ್ರೊಪಲ್ಷನ್ ಮಾಡ್ಯೂಲ್‌ನಲ್ಲಿನ ಶೇಪ್ (SHAPE) ಪೇಲೋಡ್ ಭಾನುವಾರ ಆರಂಭವಾಗಲಿದೆ'' ಎಂದು ಇಸ್ರೋ ಮಾಹಿತಿ ನೀಡಿದೆ.