ದ್ವಾರಕಾ (ಗುಜರಾತ್): ದೇಶದ ಹಲವಡೆ ಧಾರಾಕಾರ ಮಳೆಯಾಗುತ್ತಿದ್ದು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಕರ್ನಾಟಕ, ಗುಜರಾತ್, ಹರಿಯಾಣ, ತೆಲಂಗಾಣ, ಮಹಾರಾಷ್ಟ್ರ ಸೇರಿ ಹಲವು ರಾಜ್ಯಗಳಲ್ಲಿ ವರುಣನ ಆರ್ಭಟ ಜೋರಾಗಿದೆ.
ಗುಜರಾತ್, ತೆಲಂಗಾಣ, ಕರ್ನಾಟಕದಲ್ಲಿ ವರುಣಾರ್ಭಟ, ಜನ ಜೀವನ ಅಸ್ತವ್ಯಸ್ತ ಗುಜರಾತ್ನ ದ್ವಾರಕಾನಗರದ ಕಲ್ಯಾಣಪುರ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿದ್ದ, ನದಿಗಳೆಲ್ಲ ತುಂಬಿ ಹರಿಯುತ್ತಿವೆ. ಮನೆ, ಹೊಲ - ಗದ್ದೆಗಳೆಲ್ಲ ಜಲಾವೃತವಾಗಿದ್ದು, ಪ್ರವಾಹ ಭೀತಿ ಉಂಟಾಗಿದೆ. ರಸ್ತೆಗಳೆಲ್ಲ ನದಿಗಳಂತಾಗಿದ್ದು, ವಾಹನ ಸವಾರರು ಪರದಾಡುತ್ತಿದ್ದಾರೆ.
ಇತ್ತ ಹೈದರಾಬಾದ್ - ಸಿಕಂದರಾಬಾದ್ನಲ್ಲೂ ವರುಣಾರ್ಭಟ ಮುಂದುವರೆದಿದ್ದು, ನದಿ - ಕೆರೆಗಳೆಲ್ಲ ಉಕ್ಕಿ ಹರಿಯುತ್ತಿವೆ. ನಾಗೋಲ್ ಶ್ರೇಣಿಯ ಅಯ್ಯಪ್ಪ ಕಾಲೋನಿ ಮುಳುಗಿದ್ದು, ಸ್ಥಳೀಯರೆಲ್ಲ ಮನೆ ಖಾಲಿ ಮಾಡಿದ್ದಾರೆ. ಭೀಕರ ಪ್ರವಾಹದಲ್ಲಿ ಸುಮಾರು 200 ಕ್ಕೂ ಹೆಚ್ಚು ಮನೆಯ ಜನರು ಸ್ಥಳಾಂತರಗೊಂಡಿದ್ದಾರೆ.
ಇದನ್ನೂ ಓದಿ:ಧಾರಾಕಾರ ಮಳೆ: ಹಾರಂಗಿ ಜಲಾಶಯ ಭರ್ತಿ; 6 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ!
ಇಷ್ಟೆಲ್ಲಾ ಅವಾಂತರ ಸಂಭವಿಸಿದರೂ, ಕ್ರಮ ಕೈಗೊಳ್ಳದ ಜಿಹೆಚ್ಎಂಸಿ ಅಧಿಕಾರಿಗಳ ವಿರುದ್ಧ ಜನಾಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಶಾಶ್ವತ ಪರಿಹಾರವಿಲ್ಲದ ಕಾರಣ ಪ್ರತಿ ಮಳೆಗಾಲದಲ್ಲಿಯೂ ಇಲ್ಲಿನ ಜನರು ಮನೆಗಳನ್ನು ಖಾಲಿ ಮಾಡುವುದು ರೂಢಿಗತವಾಗಿದೆ. ಅಂಬರ್ಪೇಟೆ, ವನಸ್ಥಲಿಪುರಂ, ಸಿಸಾಲ ಬಸ್ತಿ, ವಿವಿ ನಗರ, ಕಮಲಾನಗರ ಪ್ರದೇಶಗಳಿಗೂ ನೀರು ನುಗ್ಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.
ಕರ್ನಾಟಕದ ಕೊಡಗು, ಬೆಂಗಳೂರು, ಚಿಕ್ಕಮಗಳೂರು, ಉತ್ತರಕನ್ನಡ, ಶಿವಮೊಗ್ಗ, ದಕ್ಷಿಣಕನ್ನಡ ಸೇರಿ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ. ಹಲವಡೆ ಪ್ರವಾಹ ಭೀತಿ ತಲೆದೋರಿದ್ದು, ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುತ್ತಿದೆ.