ಹೈದರಾಬಾದ್: ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ರೈಸಿಂಗ್ ಡೇ ಪರೇಡ್‌ಗಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ನಗರಕ್ಕೆ ಆಗಮಿಸುವ ಮುಂಚೆ ನಗರದ ಹಲವಾರು ಕಡೆಗಳಲ್ಲಿ ‘ವಾಶಿಂಗ್ ಪೌಡರ್ ನಿರ್ಮಾ’ ಎಂದು ಬರೆದ ಪೋಸ್ಟರ್ಗಳು ಕಾಣಿಸಿದವು. ಹಳೆಯ ನಿರ್ಮಾ ಜಾಹೀರಾತಿನಲ್ಲಿ ಇದ್ದ ಬಾಲಕಿ ಮತ್ತು ಹಲವಾರು ಬಿಜೆಪಿ ನಾಯಕರ ಹೆಸರುಗಳನ್ನು ಬರೆದ ಈ ಪೋಸ್ಟರ್ ಗೃಹ ಸಚಿವರಿಗೆ ಮುಜುಗರ ಉಂಟು ಮಾಡುವ ಪ್ರಯತ್ನ ಎಂದು ಹೇಳಲಾಗಿದೆ. ಇದು ಆಡಳಿತಾರೂಢ ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಯು ಭಾರತೀಯ ಜನತಾ ಪಕ್ಷದ ವಿರುದ್ಧ ನಡೆಸಿರುವ ಪೋಸ್ಟರ್ ವಾರ್ ಎನ್ನಲಾಗಿದೆ.
ಬಿಜೆಪಿ ಪ್ರಮುಖ ನಾಯಕರಾದ ನಾರಾಯಣ ರಾಣೆ, ಸುವೇಂದು ಅಧಿಕಾರಿ, ಹಿಮಂತ ಬಿಸ್ವ ಶರ್ಮಾ, ಈಶ್ವರಪ್ಪ ಮುಂತಾದವರ ಹೆಸರುಗಳು ಪೋಸ್ಟರ್ನಲ್ಲಿವೆ. ಪ್ರತಿ ಹೆಸರಿನ ಮೇಲೂ ನಿರ್ಮಾ ಹುಡುಗಿಯ ಚಿತ್ರವನ್ನು ಮುದ್ರಿಸಲಾಗಿದೆ. ಈ ಮೂಲಕ ಭ್ರಷ್ಟಾಚಾರ ಕಳಂಕಿತರು ಬಿಜೆಪಿಗೆ ಹೋದ ನಂತರ ಅವರೆಲ್ಲ ಪರಿಶುದ್ಧರಾಗುತ್ತಾರೆ ಎಂದು ವ್ಯಂಗ್ಯ ಮಾಡಲಾಗಿದೆ. ಪೋಸ್ಟರ್ ನಲ್ಲಿ ಕೆಳಭಾಗದಲ್ಲಿ ದೊಡ್ಡದಾಗಿ ವೆಲ್ಕಮ್ ಟು ಅಮಿತ್ ಶಾ ಎಂದು ಬರೆಯಲಾಗಿದೆ. ತೆಲಂಗಾಣದಲ್ಲಿ ಬಿಆರ್‌ಎಸ್ ಮತ್ತು ಬಿಜೆಪಿ ಮಧ್ಯೆ ಬಹಳ ಹಿಂದಿನಿಂದಲೂ ಪೋಸ್ಟರ್ ವಾರ್ ನಡೆದಿದ್ದು, ಇದು ಅದರ ಮುಂದಿನ ಭಾಗವಾಗಿದೆ.
ನಿನ್ನೆ, ನಗರದಲ್ಲಿ ಬಿಜೆಪಿ ನಾಯಕರ ಚಿತ್ರ ಹಾಗೂ ಇತರ ವಾಷಿಂಗ್ ಪೌಡರ್ ಬ್ರಾಂಡ್‌ನ ಚಿತ್ರವಿರುವ ಪೋಸ್ಟರ್‌ಗಳನ್ನು ಸಹ ಹಾಕಲಾಗಿತ್ತು. ಹಲವಾರು ಹಗರಣಗಳಲ್ಲಿ ಹೆಸರಿದ್ದು, ಅಂಥವರು ಬಿಜೆಪಿ ಸೇರಿದಾಗ ಅವರ ಮೇಲೆ ಯಾವುದೇ ತನಿಖಾ ಏಜೆನ್ಸಿಗಳು ದಾಳಿ ಮಾಡುವುದಿಲ್ಲ ಎಂಬುದನ್ನು ಈ ಪೋಸ್ಟರ್ಗಳ ಮೂಲಕ ಹೇಳಲಾಗಿದೆ. ನಗರದ ವಿವಿಧೆಡೆ ಸಾರ್ವಜನಿಕ ಗೋಡೆಗಳ ಮೇಲೆ ಇತರ ಪಕ್ಷಗಳಿಂದ ಬಿಜೆಪಿಗೆ ಸೇರ್ಪಡೆಗೊಂಡ ಮುಖಂಡರು ಮತ್ತು ಮತ್ತೊಂದೆಡೆ ಬಿಆರ್‌ಎಸ್ ಎಂಎಲ್‌ಸಿ ಕೆ. ಕವಿತಾ ಅವರ ಚಿತ್ರದ ಪೋಸ್ಟರ್‌ಗಳನ್ನು ಹಾಕಲಾಗಿದೆ. ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಕೆ ಕವಿತಾ ಅವರನ್ನು ಇಡಿ ವಿಚಾರಣೆಗೆ ಒಳಪಡಿಸುತ್ತಿರುವ ಮಧ್ಯದಲ್ಲಿ ಪೋಸ್ಟರ್ ವಾರ್ ಕಾಣಿಸಿಕೊಂಡಿರುವುದು ಗಮನಾರ್ಹ ಆಗಿದೆ.
ಇಡಿ ಮುಂದೆ ಹಾಜರಾದ ಕೆ ಕವಿತಾ : ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕೆ ಕವಿತಾ ಅವರು ಮಾರ್ಚ್ 11 ರಂದು ಜಾರಿ ನಿರ್ದೇಶನಾಲಯದ ಮುಂದೆ ಹಾಜರಾಗಿದ್ದರು. ಇಡಿ ವಿಚಾರಣೆಗೆ ಸಮನ್ಸ್ ನೀಡಿದ ಕೆಲ ಹೊತ್ತಿನ ನಂತರ ಮಾರ್ಚ್ 8 ರಂದು ಅವರು ರಾಷ್ಟ್ರ ರಾಜಧಾನಿಗೆ ಬಂದಿದ್ದರು. ತಮಗೆ ಸಮನ್ಸ್ ನೀಡಿರುವುದು ಮುಖ್ಯಮಂತ್ರಿ ಕೆಸಿಆರ್ ಮತ್ತು ಬಿಆರ್‌ಎಸ್ ವಿರುದ್ಧ ಕೇಂದ್ರದ ಬೆದರಿಕೆಯ ತಂತ್ರವಾಗಿದೆ ಎಂದು ಕವಿತಾ ವಾಗ್ದಾಳಿ ನಡೆಸಿದ್ದರು.
ಇದನ್ನೂ ಓದಿ :ಮಹಿಳಾ ಮೀಸಲು ಮಸೂದೆ ಜಾರಿಗೆ ತೆಲಂಗಾಣ ಸಿಎಂ ಪುತ್ರಿ ಕೆ.ಕವಿತಾ ಉಪವಾಸ