ಚಂಡೀಗಢ (ಪಂಜಾಬ್):ಭಿಂದ್ರನ್ವಾಲಾ ಪ್ರತಿರೂಪ ಎಂದೇ ಕುಖ್ಯಾತಿಯಾದ ಖಲಿಸ್ತಾನ್ ಪ್ರತ್ಯೇಕ ಹೋರಾಟಗಾರ ಅಮೃತಪಾಲ್ ಸಿಂಗ್ ಕಣ್ಮರೆಯಾಗಿದ್ದು, ಶೋಧ ಕಾರ್ಯಾಚರಣೆ ಎರಡನೇ ದಿನವಾದ ಭಾನುವಾರವೂ ಮುಂದುವರಿದಿದೆ. ನಿನ್ನೆ ಬಂಧನಕ್ಕಾಗಿ ಜಾಲ ಬೀಸಿದಾಗ ಅಮೃತ್ಪಾಲ್ ತಪ್ಪಿಸಿಕೊಂಡು ಪರಾರಿಯಾಗಿದ್ದ. ಇದೇ ವೇಳೆ ಆತನ ಕಾರು ನಾಕೋಡರ್ನಲ್ಲಿ ನಿಂತಿರುವುದು ಪತ್ತೆಯಾಗಿದೆ.
ಮೂಲಗಳ ಪ್ರಕಾರ, ಅದೇ ವಾಹನದಲ್ಲಿ ಅಮೃತಪಾಲ್ ಮೊಬೈಲ್ ಫೋನ್ ಸಿಕ್ಕಿದೆ. ಈ ಜಾಡು ಹಿಡಿದ ಪೊಲೀಸರು ಆತನ ಬಂಧನಕ್ಕಾಗಿ ಇಡೀ ಪ್ರದೇಶವನ್ನು ಜಾಲಾಡುತ್ತಿದ್ದಾರೆ. ಇನ್ನು, ಅಮೃತಪಾಲ್ ಬಂಧಿಸುವ ಪ್ರಯತ್ನದ ವಿರುದ್ಧ ಸಿಖ್ಖರು ನ್ಯೂಯಾರ್ಕ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯ ಮುಂದೆ ಪ್ರತಿಭಟನೆ ನಡೆಸಲಿದ್ದಾರೆ ಎಂದು ವರದಿಯಾಗಿದೆ.
ಸರ್ಕಾರಿ ಬಸ್ ಸಂಚಾರ ಬಂದ್:ಕಾನೂನು ಸುವ್ಯವಸ್ಥೆ ಕಾಪಾಡಲು ರಾಜ್ಯಾದ್ಯಂತ ಸರ್ಕಾರಿ ಬಸ್ಗಳನ್ನು ಎರಡು ದಿನಗಳ ಕಾಲ ಬಂದ್ ಮಾಡಲಾಗಿದೆ. ಸೋಮವಾರ ಮತ್ತು ಮಂಗಳವಾರ ಬಸ್‌ಗಳು ರಸ್ತೆಗಿಳಿಯುವುದಿಲ್ಲ. ಅಮೃತಪಾಲ್ ಬೆಂಬಲಿಗರಿಂದ ವಿಧ್ವಂಸಕ ಕೃತ್ಯಗಳ ಭೀತಿಯ ಹಿನ್ನೆಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಖಾಸಗಿ ಬಸ್‌ಗಳು ಓಡುತ್ತವೆಯೋ ಇಲ್ಲವೋ ಎಂಬುದು ಇನ್ನು ತಿಳಿದುಬಂದಿಲ್ಲ.
ಅಮೃತ್ಪಾಲ್ ಗ್ರಾಮ ಸೀಲ್:ಅಮೃತ್ಪಾಲ್ ಬಂಧನಕ್ಕಾಗಿ ನಡೆಯುತ್ತಿರುವ ಕಾರ್ಯಾಚರಣೆಯಿಂದ ಅವರ ಬೆಂಬಲಿಗರು ಅಹಿತಕರ ಘಟನೆ ನಡೆಸದಂತೆ ತಡೆಯಲು ಆತ ವಾಸವಾಗಿದ್ದ ಗ್ರಾಮವನ್ನು ಸೀಲ್ ಮಾಡಲಾಗಿದೆ. ಊರು ತುಂಬೆಲ್ಲಾ ಅರೆಸೇನಾ ಪಡೆಯನ್ನು ನಿಯೋಜಿಸಲಾಗಿದ್ದು, ಕಟ್ಟೆಚ್ಚರ ವಹಿಸಲಾಗಿದೆ. ಹಳ್ಳಿಯಿಂದ ಜನರು ಹೊರಹೋಗದಂತೆ ತಡೆಯಲಾಗಿದೆ. ಹಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನೂ ಜಾರಿ ಮಾಡಲಾಗಿದೆ.
ಈ ಮಧ್ಯೆ ಪ್ರತ್ಯೇಕತಾವಾದಿ ಅಮೃತ್ಪಾಲ್ ತಂದೆ ಮಾತನಾಡಿ, "ತನ್ನ ಮಗನನ್ನು ಹಿಡಿಯುವ ಬದಲಿಗೆ ಡ್ರಗ್ಸ್ ದಂಧೆಯನ್ನು ನಿಲ್ಲಿಸಿದರೆ ರಾಜ್ಯ ಉದ್ಧಾರವಾಗುತ್ತದೆ. ಅದು ನಿಜವಾದ ಪ್ರಗತಿ ಸಾಧಿಸಿದಂತಾಗುತ್ತದೆ. ಅಮೃತಪಾಲ್‌ನನ್ನು ಬಂಧಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದು ನಮಗೆ ಇನ್ನೂ ತಿಳಿದಿಲ್ಲ" ಎಂದು ಹೇಳಿದ್ದಾರೆ. ಪೊಲೀಸರು ಕೂಡ ಅಮೃತಪಾಲ್ ಮನೆಯನ್ನು ಶೋಧಿಸಿದ್ದು, ಶೋಧನೆಗೆ ಅವರ ಕುಟುಂಬ ಸಂಪೂರ್ಣ ಸಹಕಾರವನ್ನು ನೀಡಿದೆ ಎಂದು ತಿಳಿದುಬಂದಿದೆ.