ವಾರ್ಧ (ಮಹಾರಾಷ್ಟ್ರ):ಪುಲ್ಗಾಂವ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಿಕ್ಕ ತಲೆ ಬುರುಡೆಯ ಆಧಾರದ ಮೇಲೆ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕನ ನೆರವಿನೊಂದಿಗೆ ಪತಿಯನ್ನು ಪತ್ನಿಯೇ ಹತ್ಯೆಗೈದಿದ್ದಾಳೆ ಎಂಬ ಸಂಗತಿ ತನಿಖೆಯಿಂದ ಬಯಲಾಗಿದೆ.
ಪ್ರಕರಣದಲ್ಲಿ ಆರೋಪಿಯಾಗಿರುವ ಮನಿಷಾ ಹಾಗೂ 14 ವರ್ಷದ ಅಪ್ರಾಪ್ತ ಬಾಲಕನನ್ನು ಬಂಧಿಸಲಾಗಿದೆ. ಅನಿಲ್ ಮಧುಕರ ಬೆಂಡ್ಲೆ (46) ಮೃತ ವ್ಯಕ್ತಿ. ಆ.6 ರಂದು ಪುಲ್ಗಾಂವ್ ಪಟ್ಟಣದ ರೈಲು ಹಳಿ ಬಳಿ ಅಪರಿಚಿತ ವ್ಯಕ್ತಿಯ ತಲೆ ಬುರುಡೆ ಪತ್ತೆಯಾಗಿತ್ತು. ಬಳಿಕ ರೈಲ್ವೆ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ತನಿಖೆ ನಡೆದು ಮೃತದೇಹ ಅನಿಲ್ ಬೆಂಡಲ್ ಅವರದ್ದು ಎಂಬುದು ದೃಢಪಟ್ಟಿದೆ.
ಅನಿಲ್ ಮಲ್ಕಾಪುರ ಬೋಡಾಡ್ ನಿವಾಸಿಯಾಗಿದ್ದು, ಕೆಲವು ತಿಂಗಳುಗಳಿಂದ ಪುಲ್ಗಾವ್‌ನಲ್ಲಿ ವಾಸಿಸುತ್ತಿದ್ದ. ಈತ ಈ ಹಿಂದೆ ಗೃಹರಕ್ಷಕ ದಳದಲ್ಲಿ ಕೆಲಸ ಮಾಡುತ್ತಿದ್ದನಂತೆ. ಅಲ್ಲಿ ಕೆಲಸದಿಂದ ತೆಗೆದು ಹಾಕಿದ ಮೇಲೆ ದಿನಗೂಲಿ ಮಾಡುತ್ತಿದ್ದು, ಕುಡಿತದ ಚಟಕ್ಕೆ ಒಳಗಾಗಿದ್ದ. ಹೀಗಾಗಿ ದಿನವೂ ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಹಿರಿಯ ಮಗ 10ನೇ ತರಗತಿಯಲ್ಲಿ ಓದುತ್ತಿದ್ದು, ಮತ್ತೊಬ್ಬ ಮಗನಿಗೆ ಆರು ವರ್ಷವಾಗಿತ್ತು. ದಿನ ಗಲಾಟೆ ಮಾಡುತ್ತಿದ್ದರಿಂದ ಬೇಸತ್ತ ಪತ್ನಿ ಮಕ್ಕಳ ಸಹಾಯದಿಂದ ಪತಿಯ ಕೊಲೆ ಮಾಡಿದ್ದಾಳೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಭಾರತದ ಗಡಿಯೊಳಗೆ ಬಂದಿದ್ದ ಇಬ್ಬರು ಪಾಕಿಸ್ತಾನ ಪ್ರಜೆಗಳ ಬಂಧನ
ಕೊಲೆಯ ನಂತರ ಶವವನ್ನು ಕತ್ತರಿಸಿ, ದೇಹದ ಭಾಗಗಳನ್ನು ದೊಡ್ಡ ಚೀಲದಲ್ಲಿ ತುಂಬಿ ಸ್ಥಳೀಯ ಗ್ರಾಮ ಮಲ್ಕಾಪುರ ಬೋಡಾಡ್‌ಗೆ ಕೊಂಡೊಯ್ದಿದ್ದಾರೆ. ಅಲ್ಲಿ ಶವವನ್ನು ಅವರ ತಂದೆಯೆದುರೇ ಸುಟ್ಟು ಹಾಕಿದ್ದಾರೆ. ಭಾಗಶಃ ಸುಟ್ಟ ದೇಹವನ್ನು ರೈಲ್ವೆ ಟ್ರ್ಯಾಕ್ ಬಳಿ ಎಸೆದು ಹೋಗಿದ್ದರು.