ಹೈದರಾಬಾದ್ (ತೆಲಂಗಾಣ): ರ‍್ಯಾಗಿಂಗ್ ಕಾರಣದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ತೆಲಂಗಾಣದ ವಾರಂಗಲ್ ಜಿಲ್ಲೆಯ ಕಾಕತೀಯ ವೈದ್ಯಕೀಯ ಕಾಲೇಜಿನ (ಕೆಎಂಸಿ) ಪಿಜಿ ವೈದ್ಯಕೀಯ ವಿದ್ಯಾರ್ಥಿನಿ ಐದು ದಿನಗಳ ಕಾಲ ಜೀವನ್ಮರಣ ಹೋರಾಟದ ನಂತರ ಹೈದರಾಬಾದ್‌ನಲ್ಲಿ ಕೊನೆಯುಸಿರೆಳೆದಿದ್ದಾರೆ. ಮೃತ ವಿದ್ಯಾರ್ಥಿನಿಯನ್ನು ಪ್ರೀತಿ ಎಂದು ಗುರುತಿಸಲಾಗಿದೆ. ಹಿರಿಯ ವಿದ್ಯಾರ್ಥಿನಿ ಸೈಫ್ ಎಂಬಾತ ರ‍್ಯಾಗಿಂಗ್ ಮಾಡುತ್ತಿದ್ದ. ಇದರಿಂದ ವಿಷಪೂರಿತ ಚುಚ್ಚುಮದ್ದು ಚುಚ್ಚಿಕೊಂಡು ಆಕೆ ಆತ್ಮಹತ್ಯೆಗೆ ಯತ್ನಿಸಿದ್ದರು.
ರ್ಯಾಗಿಂಗ್ನಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ್ದ ಮೆಡಿಕಲ್ ವಿದ್ಯಾರ್ಥಿನಿ ಸಾವು
ಆತ್ಮಹತ್ಯೆಗೆ ಯತ್ನಿಸಿದ್ದ ತೆಲಂಗಾಣದ ವಾರಂಗಲ್ನ ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿನಿ ಮೃತಪಟ್ಟಿದ್ದಾರೆ.
ಬೋಡುಪ್ಪಲ್ ಪ್ರದೇಶದ ನಿವಾಸಿಯಾಗಿದ್ದ ಪ್ರೀತಿ ಎಂಬಿಬಿಎಸ್ ಮುಗಿಸಿ ವಾರಂಗಲ್ ಕೆಎಂಸಿಯಲ್ಲಿ ಅನಸ್ತೇಶಿಯಾ ವಿಭಾಗದಲ್ಲಿ ಪ್ರಥಮ ವರ್ಷದ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದಾರೆ. ಮೂರು ತಿಂಗಳ ಹಿಂದಷ್ಟೇ ಕಾಲೇಜಿಗೆ ಸೇರಿದ್ದರು. ಅಂದಿನಿಂದ ಹಿರಿಯ ವಿದ್ಯಾರ್ಥಿ ಸೈಫ್ ಕಿರುಕುಳ ನೀಡುತ್ತಿದ್ದ ಎಂದು ಹೇಳಲಾಗಿದೆ. ಹೀಗಾಗಿ ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದರು. ಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನು ಹೈದರಾಬಾದ್‌ನ ನಿಮ್ಸ್ ಆಸ್ಪತ್ರೆಗೆ ದಾಖಲಿಸಿ, ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆಗೆ ಫಲಿಸದೇ ಪ್ರೀತಿ ಮೃತಪಟ್ಟಿದ್ದಾರೆ. ಈ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ವಿದ್ಯಾರ್ಥಿ ಸಂಘಟನೆಗಳು ಆಂದೋಲನ ಪ್ರಾರಂಭಿಸಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕೆಂದು ಒತ್ತಾಯಿಸಿವೆ.
ಇದನ್ನೂ ಓದಿ:ರ್ಯಾಗಿಂಗ್ಗೆ ಬೇಸತ್ತು ಮೆಡಿಕಲ್ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ