ಕರ್ನಾಟಕ

karnataka

ETV Bharat / bharat

"ಕೆಂಪು ಡೈರಿ" ಬಹಿರಂಗಕ್ಕೆ ಒತ್ತಾಯ: ಸ್ವಪಕ್ಷದ ವಿರುದ್ಧ ಹರಿಹಾಯ್ದು ಸಚಿವ ಸ್ಥಾನ ಕಳೆದುಕೊಂಡ ಕೈ ಮುಖಂಡನಿಗೆ ವಿಧಾನಸಭೆ ಪ್ರವೇಶಕ್ಕೆ ನಿರ್ಬಂಧ

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆ ವಜಾಗೊಂಡಿರುವ ಮಾಜಿ ಸಚಿವ ರಾಜೇಂದ್ರ ಸಿಂಗ್ ಗುಡಾ ಸೋಮವಾರ ರಾಜಸ್ಥಾನ ವಿಧಾನಸಭೆ ಪ್ರವೇಶ ಮಾಡುತ್ತಿದ್ದಂತೆ ಮಾರ್ಷಲ್​ಗಳು ತಡೆದು ಹೊರಹಾಕಿದರು. ರಾಜ್ಯ ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಅಧಿವೇಶನದಲ್ಲಿಯೇ ಕೆಲವು ವಿಷಯಗಳನ್ನು ಪ್ರಸ್ತಾಪ ಮಾಡುತ್ತಾ ತಮ್ಮ ಪಕ್ಷದ ವಿರುದ್ಧವೇ ಹರಿಹಾಯ್ದಿದ್ದರು. ಈ ಮೂಲಕ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು.

ಮಾಜಿ ಸಚಿವ ರಾಜೇಂದ್ರ ಸಿಂಗ್ ಗುಡಾ
ಮಾಜಿ ಸಚಿವ ರಾಜೇಂದ್ರ ಸಿಂಗ್ ಗುಡಾ

By

Published : Jul 24, 2023, 5:17 PM IST

ಜೈಪುರ (ರಾಜಸ್ಥಾನ):ತಮ್ಮದೇ ಸರ್ಕಾರದ ವಿರುದ್ಧ ಮಾತನಾಡಿದ್ದರಿಂದ ಸಚಿವ ಸ್ಥಾನದಿಂದ ವಜಾಗೊಂಡಿರುವ ರಾಜೇಂದ್ರ ಸಿಂಗ್ ಗುಡಾ ಅವರ ವಿಧಾನಸಭೆ ಪ್ರವೇಶಕ್ಕೆ ಸೋಮವಾರ ನಿರಾಕರಣೆ ಮಾಡಲಾಯಿತು. ಇಂದು ವಿಧಾನಸಭೆ ಪ್ರವೇಶ ಮಾಡಲು ಬಂದ ಅವರನ್ನು ಸ್ಥಳದಲ್ಲಿದ್ದ ಮಾರ್ಷಲ್​ಗಳು ಬಾಗಿಲಿನಲ್ಲೇ ತಡೆದು ಒಳಪ್ರವೇಶ ಮಾಡದಂತೆ ಹೊರಗೆಡೆಯೇ ನಿಲ್ಲಿಸಿದರು. ಈ ವೇಳೆ ಕಾಂಗ್ರೆಸ್​ ಪಕ್ಷದ ಕೆಲವು ಶಾಸಕರು ಮತ್ತು ಸಚಿವರು ಇದ್ದರು.

ವಿಧಾನಸಭೆ ಪ್ರವೇಶ ದ್ವಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನನ್ನ ಬಳಿ ಇರುವ ಕೆಂಪು ಡೈರಿಯನ್ನು ಸಭಾಪತಿಗೆ ಪ್ರಸ್ತುತಪಡಿಸಲು ನಾನು ಬಯಸಿದ್ದೆ. ಆದರೆ, ಅವರು ನನಗೆ ಮಾತನಾಡಲು ಅವಕಾಶ ನೀಡಲಿಲ್ಲ. ಕಾಂಗ್ರೆಸ್ ಮುಖಂಡ ಶಾಂತಿ ಕುಮಾರ್ ಧರಿವಾಲ್ ಸೇರಿದಂತೆ ಸುಮಾರು 50 ಮಂದಿ ಕಾಂಗ್ರೆಸ್ ಮುಖಂಡರು ನನ್ನನ್ನು ತಳ್ಳಾಡಿದ್ದಾರೆ. ನನ್ನೊಂದಿಗೆ ಜಗಳವಾಡಿದ್ದಾರೆ. ನನ್ನ ಬಳಿ ಇರುವ ಡೈರಿಯ ಕೆಲವು ಪುಟಗಳನ್ನು ಕಿತ್ತುಕೊಂಡಿದ್ದಾರೆ. ಅರ್ಧ ಡೈರಿ ನನ್ನ ಬಳಿ ಇದೆ. ಉಳಿದ ಭಾಗ ಅವರ ಬಳಿ ಇದೆ. ಅಲ್ಲದೇ ಕೆಲವು ಕಾಂಗ್ರೆಸ್ ನಾಯಕರು ನನ್ನನ್ನು ಒದ್ದು, ವಿಧಾನಸಭೆಯಿಂದ ಹೊರಹಾಕಿದ್ದಾರೆ. ಅಧಿವೇಶನಕ್ಕೆ ಹಾಜರಾಗದಂತೆ ನನಗೆ ಬೆದರಿಕೆ ಹಾಕುತ್ತಿದ್ದಾರೆ. ಅಲ್ಲದೇ ನನ್ನನ್ನು ಜೈಲಿಗೆ ಕಳುಹಿಸಲಾಗುವುದು ಎಂದು ಸಹ ಹೆದರಿಸುತ್ತಿದ್ದಾರೆ'' ಎಂದು ರಾಜೇಂದ್ರ ಸಿಂಗ್ ಗುಡಾ ತಮ್ಮ ಸರ್ಕಾರದ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.

ನಾನು ಭಾರತೀಯ ಜನತಾ ಪಕ್ಷದೊಂದಿಗೆ ಸೇರಿಕೊಂಡಿದ್ದೇನೆ ಅಂತ ನನ್ನ ವಿರುದ್ಧ ಆರೋಪಗಳಿವೆ. ಆದರೆ, ನನ್ನ ತಪ್ಪೇನು? ಇದನ್ನು ತಿಳಿದುಕೊಳ್ಳಬೇಕಾಗಿದೆ. ಕೆಂಪು ಡೈರಿಯಲ್ಲಿ ಏನಿಲ್ಲ ಎಂದರೆ ಸರ್ಕಾರ ಏಕೆ ಹೆದರಬೇಕು? ಈ ಡೈರಿಯಲ್ಲಿರುವುದನ್ನು ಹೇಳಲು ಬಿಡಬೇಕು ಎಂದು ಗುಡಾ ಮಾಧ್ಯಮದವರ ಮುಂದೆ ಕಣ್ಣೀರು ಸಹ ಹಾಕಿದ್ದಾರೆ.

ರಾಜ್ಯದಲ್ಲಿ ಮಹಿಳೆಯರ ಸ್ಥಿತಿಗತಿ ಕುರಿತು ವಿಧಾನಸಭೆಯಲ್ಲಿ ತಾವು ಮಾಡಿದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಈ ವಿಚಾರದಲ್ಲಿ ತಾನು ಕ್ಷಮೆ ಕೂಡ ಕೇಳುವುದಿಲ್ಲ. ಏಕೆಂದರೆ ನಾನು ತಪ್ಪು ಹೇಳಿಕೆ ನೀಡಿಲ್ಲ. ಈ ಬಗ್ಗೆ ಹೋರಾಟ ಮಾಡುವೆ ವಿನಹಃ ಕ್ಷಮೆ ಮಾತ್ರ ಕೇಳುವುದಿಲ್ಲ. ರಾಜ್ಯದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳ ಕುರಿತು ಸದನದಲ್ಲಿ ಮಾತನಾಡಲು ಯಾರೂ ಸಹ ಅವಕಾಶ ಮಾಡಿಕೊಡಲಿಲ್ಲ. ಆದರೆ, ಈಗ ನಾನು ಸ್ವತಂತ್ರವಾಗಿದ್ದೇನೆ ಎಂದು ಅವರು ಹೇಳಿದರು.

ಗುಡಾ ಅವರು ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣ ಸಂಬಂಧ ವಿಧಾನಸಭೆಯಲ್ಲಿ ಮಾತನಾಡುತ್ತಾ, ತಮ್ಮ ಸರ್ಕಾರದ ವಿರುದ್ಧವೇ ವಾಗ್ದಾಳಿ ನಡೆಸಿದ್ದರು. ಮಹಿಳೆಯರ ಸುರಕ್ಷತೆಯಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕು. ಅವರ ಸುರಕ್ಷತೆಯಲ್ಲಿ ನಾವು ವಿಫಲರಾಗಿದ್ದು ನಿಜ ಮತ್ತು ಅದನ್ನು ಅಲ್ಲಗಳೆಯಬಾರದು. ಮಣಿಪುರದ ಬದಲಿಗೆ, ರಾಜಸ್ಥಾನದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳು ಏಕೆ ಹೆಚ್ಚಿವೆ ಎಂಬುದನ್ನು ನಾವು ನಮ್ಮೊಳಗೆ ಕೇಳಿಕೊಳ್ಳಬೇಕು ಎಂದು ಹೇಳಿದ್ದರು.

ಅಲ್ಲದೇ ತಮ್ಮ ಬಳಿ ರಹಸ್ಯ ಕೆಂಪು ಡೈರಿ ಇದ್ದು, ಸಭಾಪತಿಗಳಿಗೆ ಅದನ್ನು ನೀಡುವುದಾಗಿ ಹೇಳಿದ್ದರು. ಈ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡುವಂತೆಯೂ ಮನವಿ ಮಾಡಿದ್ದರು. ಇದರಿಂದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ರಾಜ್ಯ ಕಾಂಗ್ರೆಸ್​ ಸರ್ಕಾರ, ರಹಸ್ಯ ಕೆಂಪು ಡೈರಿ ಸಭಾಪತಿಗಳಿಗೆ ನೀಡುವುದಕ್ಕೂ ಮುನ್ನ, ಅವರನ್ನು ತಕ್ಷಣ ಜಾರಿಗೆ ಬರುವಂತೆ ಸಚಿವ ಸ್ಥಾನದಿಂದ ವಜಾಗೊಳಿಸಿ ಆದೇಶ ನೀಡಿದೆ. ಆದರೂ, ತಾವು ಈ ರಹಸ್ಯ ಕೆಂಪು ಡೈರಿಯನ್ನು ನೀಡುವುದಾಗಿ ಇಂದು ವಿಧಾನಸಭೆಗೆ ಆಗಮಿಸಿದ್ದರು.

ಇದನ್ನೂ ಓದಿ: Parliament Session: ಸಂಸತ್ತಿನಲ್ಲಿ ಪ್ರತಿಧ್ವನಿಸಿದ ಮಣಿಪುರ ಹಿಂಸಾಚಾರ; ಉಭಯ ಸದನಗಳಲ್ಲಿ ಪ್ರಧಾನಿ ಹೇಳಿಕೆಗೆ ಪ್ರತಿಪಕ್ಷಗಳ ಪಟ್ಟು

ABOUT THE AUTHOR

...view details