ನವದೆಹಲಿ:ರಾಜ್ಯದಲ್ಲಿ ಜಾತಿ ಆಧಾರಿತ ಜನಗಣತಿಗೆ ಒತ್ತಾಯಿಸಿ, ಈ ವಿಷಯದ ಕುರಿತು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಲು ಕೋರಿದ್ದೇನೆ. ಆದರೆ ಈ ಬಗ್ಗೆ ಇದುವರೆಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಈ ಹಿಂದೆ ನಿತೀಶ್ಕುಮಾರ್ ಅವರ ಜನತಾದಳ ಯುನೈಟೆಡ್ (ಜೆಡಿಯು) ನ ಸಂಸದರಿಗೂ ಕೂಡ ಪ್ರಧಾನಿ ಭೇಟಿಗೆ ನಿರಾಕರಿಸಲಾಗಿತ್ತು. ಬದಲಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡುವಂತೆ ತಿಳಿಸಲಾಗಿತ್ತು.
ಜಾತಿ ಗಣತಿಯು ಕೆಲವು ಜನರ ಅಸಮಾಧಾನಕ್ಕೆ ಕಾರಣವಾಗಲಿದೆ ಎಂಬುದು ಆಧಾರ ರಹಿತವಾಗಿದೆ. ಜಾತಿ ಗಣತಿ ಮಾಡುವುದು, ಬಿಡುವುದು ಕೇಂದ್ರಕ್ಕೆ ಬಿಟ್ಟ ವಿಚಾರವಾಗಿದೆ. ಅಭಿಪ್ರಾಯಗಳನ್ನು ತಿಳಿಸುವುದು ನಮ್ಮ ಕೆಲಸವಾಗಿದೆ. ಜಾತಿ ಗಣತಿಯನ್ನು ಒಂದು ಜಾತಿಯವರು ಒಪ್ಪುತ್ತಾರೆ, ಇನ್ನೊಂದು ಜಾತಿಯವರು ಒಪ್ಪುವುದಿಲ್ಲ ಎಂದು ಭಾವಿಸಬೇಡಿ. ಇದು ಎಲ್ಲರ ಹಿತಾಸಕ್ತಿ ಎಂದು ಅವರು ಹೇಳಿದ್ದಾರೆ.
ಸಮಾಜದಲ್ಲಿ ಯಾವುದೇ ಉದ್ವಿಗ್ನತೆ ಸೃಷ್ಟಿಯಾಗುವುದಿಲ್ಲ, ಎಲ್ಲವು ಸಂತಸದಿಂದ ಕೂಡಿರಲಿದೆ. ಪ್ರತಿಯೊಂದು ಸ್ತರದ ಜನರೂ ಯೋಜನೆಗಳಿಂದ ಪ್ರಯೋಜನ ಪಡೆಯುತ್ತಾರೆ. ಇಂತಹ ಗಣತಿಯು ಬ್ರಿಟಿಷ್ ಆಳ್ವಿಕೆಯಲ್ಲೂ ನಡೆದಿದೆ ಎಂದಿದ್ದಾರೆ.