ಲಖನೌ(ಉತ್ತರ ಪ್ರದೇಶ):ದೇಶವು ಬ್ರಹ್ಮೋಸ್ ಕ್ಷಿಪಣಿಗಳನ್ನು ತಯಾರಿಸಲು ಬಯಸಿದ್ದು, ಯಾರ ಮೇಲೂ ದಾಳಿ ಮಾಡುವ ಉದ್ದೇಶಕ್ಕಲ್ಲ. ಭಾರತದ ಮೇಲೆ ಯಾವುದೇ ದೇಶದ ಕೆಟ್ಟ ಕಣ್ಣು ಬೀಳದೇ ಇರಲಿ ಎಂಬ ಕಾರಣಕ್ಕೆ ಬ್ರಹ್ಮೋಸ್ ಕ್ಷಿಪಣಿ ತಯಾರಿಸುತ್ತಿದ್ದೇವೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ತಿಳಿಸಿದ್ದಾರೆ.
ಉತ್ತರ ಪ್ರದೇಶದ ಲಖನೌನಲ್ಲಿ ಬ್ರಹ್ಮೋಸ್ ಕ್ಷಿಪಣಿ ತಯಾರಿಕಾ ಘಟಕ ಮತ್ತು ಡಿಆರ್ಡಿಒ ಲ್ಯಾಬ್ ಸ್ಥಾಪನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಯಾವುದೇ ದೇಶದ ಮೇಲೆ ದಾಳಿ ಮಾಡುವುದು ಅಥವಾ ಯಾವುದೇ ದೇಶದ ಒಂದು ಇಂಚು ಭೂಮಿಯನ್ನು ಆಕ್ರಮಿಸುವುದನ್ನು ಭಾರತ ಬಯಸುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.
ವಿಶ್ವದ ಯಾವುದೇ ದೇಶವು ನಮ್ಮ ಮೇಲೆ ದಾಳಿ ಮಾಡದಂತಿರಲು ಭಾರತವು ಪರಮಾಣು ನಿರೋಧಕ ಶಸ್ತ್ರಗಳನ್ನು ಹೊಂದಿರಬೇಕು. ಆದ್ದರಿಂದ ನಾವು ಬ್ರಹ್ಮೋಸ್ ಕ್ಷಿಪಣಿಗಳನ್ನು ತಯಾರಿಸುತ್ತಿದ್ದೇವೆ ಎಂದಿರುವ ರಾಜನಾಥ ಸಿಂಗ್ ನಾವು ಯಾರನ್ನೂ ಪ್ರಚೋದಿಸುವುದಿಲ್ಲ. ಪ್ರಚೋದನೆ ಮಾಡುವವರನ್ನು ಬಿಡುವುದಿಲ್ಲ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.
Rajnath Singh on Pakistan: ನೆರೆಯ ರಾಷ್ಟ್ರವಾಗಿ ಭಾರತದಿಂದ ಬೇರ್ಪಟ್ಟ ರಾಷ್ಟ್ರವೊಂದಿದೆ. ಭಾರತದ ವಿರುದ್ಧ ಯಾವಾಗಲೂ ಅದು ಕಿಡಿಕಾರುತ್ತಿದ್ದು, ಯಾಕೆ ಎಂಬುದು ನನಗೆ ತಿಳಿದಿಲ್ಲ. ಅನೇಕ ಭಯೋತ್ಪಾದನಾ ಕೃತ್ಯಗಳನ್ನು ಮಾಡಿದೆ ಎಂದು ಪಾಕಿಸ್ತಾನಕ್ಕೆ ರಾಜನಾಥ ಸಿಂಗ್ ಪರೋಕ್ಷವಾಗಿ ತಿವಿದರು.
ಪ್ರಧಾನಿ ಮೋದಿಯವರು ದಿಟ್ಟ ನಿರ್ಧಾರ ತೆಗೆದುಕೊಂಡಿದ್ದರು. ಅದೇ ದೇಶದೊಳಗೆ ನುಗ್ಗಿ ಭಯೋತ್ಪಾದಕರ ಅಡಗುದಾಣಗಳನ್ನು ನಾಶಪಡಿಸಿದ್ದೇವೆ. ಅಗತ್ಯಬಿದ್ದಾಗ ವೈಮಾನಿಕ ದಾಳಿಯನ್ನೂ ನಾವು ಯಶಸ್ವಿಯಾಗಿ ಮಾಡಿದ್ದೇವೆ ಎಂದರು.