ಪ್ರಸ್ತುತ ದಿನಮಾನಗಳಲ್ಲಿ ಎಲ್ಲ ವಯೋಮಾನದವರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಒಂದಲ್ಲೊಂದು ಮಾರ್ಗ ಹುಡುಕುತ್ತಿದ್ದಾರೆ. ಏಕೆಂದರೆ, ಅಷ್ಟರ ಮಟ್ಟಿಗೆ ಇತ್ತೀಚಿನ ಆಹಾರ ಪದ್ದತಿ ನಮ್ಮ ಆರೋಗ್ಯದ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿದೆ. ಆರೋಗ್ಯ ಉತ್ತಮವಾಗಿರಬೇಕೆಂದರೆ ಉತ್ತಮ ಗುಣಮಟ್ಟದ ಆಹಾರದೊಂದಿಗೆ ಒಳ್ಳೆಯ ವಿಶ್ರಾಂತಿ ಬೇಕು.
ದೇಹದ ತೂಕವನ್ನು ನಿಯಂತ್ರಣದಲ್ಲಿಡಲು ಕಟ್ಟುನಿಟ್ಟಾದ ಆಹಾರ ಪದ್ದತಿಯನ್ನು ಅನುಸರಿಸಲೇಬೇಕು. ಅಲ್ಲಿ ಜಂಕ್ ಫುಡ್ಗಳಿಗೆ ಹೆಚ್ಚು ಅವಕಾಶವಿರದು. ಬಾಯಿ ಚಪ್ಪರಿಸುವ ತಿನ್ನಬೇಕೆನ್ನಿಸುವ ಆಹಾರಗಳ ಬಗ್ಗೆ ನಿಯಂತ್ರಣ ಬೇಕು. ಹಾಗಂತ ತಿನ್ನಲೇ ಬಾರದು ಅಂತೇನಿಲ್ಲ. ಕಡಿಮೆ ಪ್ರಮಾಣದಲ್ಲಿ ತಿನ್ನಬೇಕು ಅಷ್ಟೇ. ಮಿತಿ ಮೀರಿದರೆ ಯಾವುದೇ ರೀತಿಯ ಒಳ್ಳೆಯ ಫಲಿತಾಂಶ ಸಿಗದು. ಈ ರೀತಿಯ ಸಂದರ್ಭ ಎದುರಾದಾಗ ಆಹಾರ ಕ್ರಮವನ್ನು ಹೇಗೆ ಮುಂದುವರಿಸಬಹುದು? ಇದನ್ನು ನಿಯಂತ್ರಣಕ್ಕೆ ತರುವುದು ಹೇಗೆ ಎಂಬ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ದೇಹಕ್ಕೆ ಸಾಕಷ್ಟು ಪ್ರಮಾಣದಲ್ಲಿ ನೀರು ಬೇಕು:ದೈನಂದಿನ ಬದುಕಿನಲ್ಲಿ ಪ್ರತಿಯೊಬ್ಬರೂ ಬೆಳಗ್ಗೆದ್ದಾಗ ಬಿಸಿ ನೀರು ಕುಡಿಯುವ ಅಭ್ಯಾಸ ರೂಢಿಸಿಕೊಳ್ಳಬೇಕು. ಒಂದು ವೇಳೆ ಹೆಚ್ಚು ನೀರು ಕುಡಿಯುವುದನ್ನು ತಪ್ಪಿಸಿದರೆ ಆಗ ಮನಸ್ಸು ರುಚಿ ರುಚಿ ತಿಂಡಿಗಳತ್ತ ಹೊರಳುತ್ತದೆ. ಆದ್ದರಿಂದ, ಸಾಕಷ್ಟು ನೀರು ಮತ್ತು ಹಣ್ಣಿನ ರಸ ಕುಡಿಯಿರಿ. ಇದರಿಂದ ದೇಹದ ತೂಕ ಕಡಿಮೆ ಆಗುವುದರ ಜೊತೆಗೆ ಆರೋಗ್ಯಕ್ಕೂ ಒಳಿತು. ಮತ್ತೊಂದು ಮುಖ್ಯವಾದ ವಿಷಯವೆಂದರೆ, ಸೋಡಾ ಮತ್ತು ಕಾರ್ಬೊನೇಟೆಡ್ ಪಾನೀಯಗಳನ್ನು ಅದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸುವುದನ್ನು ಅಭ್ಯಾಸ ಮಾಡಿಕೊಳ್ಳುವುದು.
ಪ್ಯಾಕೇಜ್ಡ್ ಆಹಾರ ತಿನ್ನುತ್ತಿದ್ದೀರಾ?:ಇವುಗಳಲ್ಲಿ ಅತಿಹೆಚ್ಚು ಪ್ರಮಾಣದ ಸಕ್ಕರೆ, ಉಪ್ಪು ಮತ್ತು ಕೊಬ್ಬಿನಾಂಶ ಇರುತ್ತದೆ. ಆಹಾರ ಕೆಡದಂತೆ ತಡೆಯಲು ರಾಸಾಯನಿಕ ಸಂರಕ್ಷಕಗಳನ್ನು ಇಲ್ಲಿ ಯಥೇಚ್ಚವಾಗಿ ಬಳಸಲಾಗುತ್ತದೆ. ಇದರಿಂದ ಇಂತಹ ಆಹಾರದೆಡೆ ಒಲವು ಹೆಚ್ಚಾಗಿ ಅತಿಯಾಗಿ ತಿನ್ನುವುದಕ್ಕೆ ಕಾರಣವಾಗುತ್ತವೆ. ಇಂಥ ಸಂದರ್ಭದಲ್ಲಿ ನಿಮಗೆ ಹಸಿವಾದರೆ ತಾಜಾ ಹಣ್ಣುಗಳು, ಡ್ರೈ ಫ್ರೂಟ್ಸ್ ತಿನ್ನಿ. ಇದರಿಂದ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ದೊರೆಯುತ್ತವೆ. ಬೇಗ ಹಸಿವಾಗದಂತೆಯೂ ಮಾಡುತ್ತದೆ. ನಿಮ್ಮ ದೈನಂದಿನ ಆಹಾರದಲ್ಲಿ ಮೊಟ್ಟೆ, ಮಾಂಸ, ಮೀನು ಮತ್ತು ಬೇಳೆಕಾಳುಗಳನ್ನು ಸೇರಿಸಿಕೊಳ್ಳಬಹುದು.
ಚೆನ್ನಾಗಿ ನಿದ್ದೆ ಮಾಡುತ್ತಿದ್ದೀರಾ?:ಪ್ರತಿದಿನ ಕನಿಷ್ಠ 7-8 ಗಂಟೆಗಳ ನಿದ್ದೆ ಕಡ್ಡಾಯವಾಗಿ ಬೇಕಿದೆ. ಇದರಿಂದ ನಿಜಕ್ಕೂ ದೇಹಕ್ಕೆ ಮಾನಸಿಕ ಹಾಗೂ ದೈಹಿಕವಾಗಿ ಸಕಾರಾತ್ಮಕ ಶಕ್ತಿ ಸಿಗುತ್ತದೆ. ಒಂದು ವೇಳೆ ನಿದ್ದೆ ಕಡಿಮೆಯಾದರೆ ಹಸಿವು ಹೆಚ್ಚುತ್ತದೆ. ಅನಾರೋಗ್ಯಕರ ಆಹಾರವನ್ನು ತಿನ್ನುವ ಬಯಕೆಯೂ ಉಂಟಾಗುತ್ತದೆ. ಇದೆಲ್ಲ ಒತ್ತಡವು ಜಂಕ್ ಫುಡ್ ತಿನ್ನಲು ನಿಮ್ಮನ್ನು ಉತ್ತೇಜಿಸುತ್ತದೆ. ಇದರಿಂದ ಆರೋಗ್ಯ ಕೆಡುತ್ತದೆ.
ಟಿವಿ, ಫೋನ್ ನೋಡುತ್ತಾ ಊಟ ಮಾಡುವಿರಾ?: ಟಿವಿ, ಫೋನ್ ನೋಡುತ್ತಾ ಊಟ ಮಾಡಿದರೆ ಎಷ್ಟು ತಿಂದಿದ್ದೀರಿ ಎಂಬ ಅರಿವೇ ನಿಮಗೆ ಇರುವುದಿಲ್ಲ. ಹಸಿವಾದಾಗ ಮಾತ್ರ ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಒತ್ತಾಯಕ್ಕಾಗಿಯೂ ತಿನ್ನಬೇಡಿ. ಈ ನಿಯಮಗಳು ನಿಮ್ಮ ತಿನ್ನುವ ಬಯಕೆಯನ್ನು ತ್ವರಿತವಾಗಿಯೂ ಪೂರೈಸುವುದಿಲ್ಲ. ಆಹಾರ ಸೇವನೆಗೆ ನಿರ್ದಿಷ್ಟ ಸಮಯವನ್ನು ಹೊಂದಿಸಿ. ಆ ಸಮಯದಲ್ಲಿ ತಿನ್ನುವುದನ್ನು ರೂಢಿ ಮಾಡಿಕೊಂಡರೆ ದೇಹಕ್ಕೆ ಒಳ್ಳೆಯದು.
ಇದನ್ನೂ ಓದಿ:ಎಷ್ಟು ನಿದ್ರೆ ಮಾಡ್ತೀರಿ ಎಂಬುದರ ಮೇಲೆ ಕೋವಿಡ್ ಲಸಿಕೆ ಪರಿಣಾಮ ಅವಲಂಬಿತವಾಗಿದೆ!