ಮವೂ( ಉತ್ತರಪ್ರದೇಶ):ಉತ್ತರಪ್ರದೇಶದ ಮವೂ ಜಿಲ್ಲೆಯಲ್ಲಿ ಹಲ್ದಿ ಸಮಾರಂಭದ ವೇಳೆ ಗೋಡೆ ಕುಸಿದು ಇಬ್ಬರು ಮಕ್ಕಳು ಮತ್ತು ನಾಲ್ವರು ಮಹಿಳೆಯರು ಸೇರಿ ಒಟ್ಟು ಆರು ಜನ ಸಾವನ್ನಪ್ಪಿರುವ ಘಟನೆ ನಡೆದಿದೆ.
ಘೋಸಿ ಕೊತ್ವಾಲಿ ಪ್ರದೇಶದಲ್ಲಿ ನಿನ್ನೆದಿನ ಮದುವೆ ಹಿನ್ನೆಲೆ ಹಲ್ದಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ವೇಳೆ ಗೋಡೆ ಕುಸಿದು 4 ಜನರು ಮೃತಪಟ್ಟಿದ್ದರು. ಇಂದು ಮತ್ತಿಬ್ಬರು ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದು, ಸಾವಿನ ಸಂಖ್ಯೆ 6ಕ್ಕೆ ಏರಿಕೆಯಾಗಿದೆ. ಘಟನೆಯಲ್ಲಿ ಒಟ್ಟು 22 ಮಂದಿ ಗಾಯಗೊಂಡಿದ್ದಾರೆ. ಅವಶೇಷಗಳಡಿ ಸಿಲುಕಿದ್ದ ಜನರನ್ನು ಸ್ಥಳೀಯರು ರಕ್ಷಣೆ ಮಾಡಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳ ಚಿಕಿತ್ಸೆ ಮುಂದುವರೆದಿದೆ.
ಮೃತರ ಗುರುತು:ಘಟನೆಯಲ್ಲಿ ಮೃತಪಟ್ಟವರ ಗುರುತು ಪತ್ತೆಹಚ್ಚಲಾಗಿದೆ. ವಾಸ ಪಟ್ಟಣದ ಮೀರಾ(36), ಬೆಲಿಸಾ ನಿವಾಸಿ ಪೂಜಾ(35), ಮಾದಾಪುರ ಸಮಸ್ಪುರ ವಾಸಿ ಚಂದ್ರಾದೇವಿ(30), ಸುಶೀಲ(52), ನಮ್ರತಾ(04), ಮಾಧವ್.
ಘಟನೆ ವಿವರ:ಶುಕ್ರವಾರ (ನಿನ್ನೆ) ಮಧ್ಯಾಹ್ನ 3 ಗಂಟೆ ಸುಮಾರಿಗೆ ಮವೂ ಜಿಲ್ಲೆಯ ಘೋಸಿ ಪಟ್ಟಣದ ಶಾಲೆಯೊಂದರ ಬಳಿ ಗೋಡೆಯೊಂದರ ನಿರ್ಮಾಣಕಾರ್ಯ ನಡೆಸಲಾಗಿತ್ತು. ಈ ವೇಳೆ, ಅದೇ ಮಾರ್ಗವಾಗಿ ಮಹಿಳೆಯರು ಹಲ್ದಿ ಸಮಾರಂಭಕ್ಕೆ ಎಂದು ತೆರಳುತ್ತಿದ್ದರು. ಈ ವೇಳೆ ಏಕಾಏಕಿ ನಿರ್ಮಾಣ ಹಂತದ ಗೋಡೆ ಕುಸಿದು ಮಹಿಳೆಯರ ಮೇಲೆ ಬಿದ್ದಿದೆ. ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಉಳಿದಂತೆ 22ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿದ್ದರು. ಕೂಡಲೇ ಸ್ಥಳೀಯರು ಮತ್ತು ಪೊಲೀಸ್ ಸಿಬ್ಬಂದಿ ರಕ್ಷಣೆ ಮಾಡಿ ಗಾಯಾಳುಗಳನ್ನು ಸ್ಥಳೀಯ ಅಜಂಗಢದ ಆಸ್ಪತ್ರೆಗಳಿಗೆ ದಾಖಲಿಸಿದ್ದಾರೆ.
ಸ್ಥಳೀಯರ ಪ್ರಕಾರ:ಘಟನೆ ಬಗ್ಗೆ ಘೋಸಿ ಪಟ್ಟಣದ ನಿವಾಸಿಗಳು ಮಾಹಿತಿ ನೀಡಿದ್ದಾರೆ. ಇಲ್ಲಿಯ ರಾಧೇಶ್ಯಾಮ್ ಮತ್ತು ಬ್ರಿಜೇಶ್ ಮಾದೇಶಿಯಾ ಅವರ ಮನೆಯಲ್ಲಿ ಶುಕ್ರವಾರ ಹಲ್ದಿ ಕಾರ್ಯಕ್ರಮ ಆಚರಣೆ ಮಾಡಲಾಗುತ್ತಿತ್ತು. ಕಾರ್ಯಕ್ರಮಕ್ಕೆ ಆಗಮಿಸುವ ವೇಳೆ ಮಹಿಳೆಯರ ಮೇಲೆ ಗೋಡೆಯೊಂದು ಕುಸಿದು ಬಿದ್ದಿದೆ. ಸುಮಾರು 29 ಜನರು ಅವಶೇಷಗಳಡಿ ಸಿಲುಕಿದ್ದರು ಎಂದು ತಿಳಿಸಿದ್ದಾರೆ.
ಪರಿಹಾರ ಘೋಷಿಸಿದ ಸಿಎಂ ಯೋಗಿ: ಘಟನೆಯ ಮಾಹಿತಿ ತಿಳಿದ ತಕ್ಷಣ ಜಿಲ್ಲಾಧಿಕಾರಿ ಅರುಣ್ ಕುಮಾರ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅವಿನಾಶ್ ಪಾಂಡೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಾಯಾಳು ಕುಟುಂಬಗಳಿಗೆ ತಲಾ 50 ಸಾವಿರ ರೂಪಾಯಿಗಳ ಪರಿಹಾರ ನೀಡುವಂತೆ ಸೂಚಿಸಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಇದನ್ನೂ ಓದಿ:ಮನೆಯ ಹಳೆ ಗೋಡೆ ಉರುಳಿಸುವಾಗ ಭೀಕರ ಅಪಘಾತ: ಮಹಿಳೆ ಸೇರಿ ಇಬ್ಬರು ಮಕ್ಕಳಿಗೆ ಗಾಯ