ಭೋಪಾಲ್(ಮಧ್ಯಪ್ರದೇಶ) :ರಾಜಕಾರಣಿಗಳು, ಗಣ್ಯರಿಗೆ ಭದ್ರತೆ ನೀಡುವುದು ಸಹಜ. ಆದರೆ, ಇಲ್ಲಿ ಹಣ್ಣುಗಳ ರಾಜ ಮಾವಿನ ಹಣ್ಣಿಗೂ ಭದ್ರತೆ ನೀಡಲಾಗಿದೆ. ಆಶ್ಚರ್ಯವಾದರೂ ಇದು ಸತ್ಯ. ಭೋಪಾಲ್ನಲ್ಲಿರುವ ಪರೇಡ್ ಗ್ರೌಂಡ್ನಲ್ಲಿರುವ ಹುತಾತ್ಮರ ಸ್ಮಾರಕದ ಸುತ್ತಲೂ ಬೆಳೆಸಲಾದ ಮಾವಿನ ಹಣ್ಣಿನ ಗಿಡಗಳಿಗೆ ಎಸ್ಎಎಫ್ ಪೊಲೀಸ್ ಸಿಬ್ಬಂದಿ ಕಾವಲಿಗೆ ನಿಯೋಜಿಸಲಾಗಿದೆ. ಇಲ್ಲಿ ಬೆಳೆಯುವ ಮಾವಿನ ಹಣ್ಣುಗಳ ಯಾರೂ ಕೀಳಬಾರದು ಎಂದು ಈ ಭದ್ರತೆ ನೀಡಲಾಗಿದೆ.
ನಗರದ ಹೃದಯ ಭಾಗದಲ್ಲಿರುವ ರೆಡ್ ಪರೇಡ್ ಮೈದಾನದಲ್ಲಿರುವ ಹುತಾತ್ಮ ಸ್ಮಾರಕದ ಸುತ್ತ ಪ್ರತಿ ವರ್ಷ 50ಕ್ಕೂ ಹೆಚ್ಚು ಮಾವಿನ ಗಿಡಗಳನ್ನು ನೆಡಲಾಗುತ್ತದೆ. ಸ್ಥಳೀಯ ತಳಿಯ ಮಾವು ಮಾತ್ರವಲ್ಲದೇ ತೋತಾಪುರಿ, ದುಸ್ಸೆರಿ, ಲಾಂಗ್ರಾದಂತಹ ತರಹೇವಾರಿ ಮಾವಿನ ಹಣ್ಣಿನ ಗಿಡಗಳನ್ನು ಇಲ್ಲಿ ಬೆಳೆಯಲಾಗುತ್ತದೆ. ಇದು ಜನರನ್ನು ಹೆಚ್ಚು ಆಕರ್ಷಿಸುತ್ತಿದೆ. ಜನರು ಬಂದು ಹಣ್ಣನ್ನು ಕದ್ದೊಯ್ಯುವುದನ್ನು ತಡೆಯಲು ಪೊಲೀಸರ ಕಣ್ಗಾವಲು ಇಡಲಾಗಿದೆ.
ದಿನದ 24 ಗಂಟೆಯೂ ಕಾವಲು: ಇಲ್ಲಿನ ಮಾವಿನ ಮರಗಳಿಗೆ ಎಸ್ಎಎಫ್ ಸಿಬ್ಬಂದಿ ದಿನದ 24 ಗಂಟೆಯೂ ಕಾವಲು ನೀಡುತ್ತಾರೆ. ಈ ಮಾವಿನ ಮರಗಳ ಬಳಿ ಯಾರೂ ಸುಳಿಯದಂತೆ ನೋಡಿಕೊಳ್ಳುತ್ತಾರೆ. ಅಷ್ಟೇ ಅಲ್ಲದೇ ರಾತ್ರಿ ವೇಳೆಯೂ ಕಣ್ಗಾವಲಿರುವ ಸಿಬ್ಬಂದಿ ಸ್ಟಿಕ್ ಮತ್ತು ಟಾರ್ಚ್‌ಗಳನ್ನು ಹಿಡಿದು ಗಸ್ತು ತಿರುಗುತ್ತಾರಂತೆ. ಇಲ್ಲಿ ಬೆಳಯುವ ಮಾವಿನ ಹಣ್ಣುಗಳನ್ನು ಪೊಲೀಸ್ ಅಧಿಕಾರಿಗಳು ಮತ್ತು ನೌಕರರಿಗೆ ಮಾತ್ರ ಹಂಚಲಾಗುತ್ತದೆ.
ಲಾಲ್ ಪರೇಡ್ ಮೈದಾನ ಮತ್ತು ಮೋತಿಲಾಲ್ ನೆಹರು ಕ್ರೀಡಾಂಗಣವನ್ನು ಆರನೇ ಬೆಟಾಲಿಯನ್ ನೋಡಿಕೊಳ್ಳುತ್ತದೆ. ಈ ಬೆಟಾಲಿಯನ್‌ನ ನಾಲ್ವರು ಸಿಬ್ಬಂದಿ 24 ಗಂಟೆಗಳ ಕಾಲ ಇಲ್ಲಿಯೇ ಠಿಕಾಣಿ ಹೂಡುತ್ತಾರೆ. ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಪೊಲೀಸ್ ಚಟುವಟಿಕೆಗಳು ಅಥವಾ ದೊಡ್ಡ ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ ಇಲ್ಲಿ ಅವಕಾಶವಿದ್ದು, ಸಾಮಾನ್ಯ ದಿನಗಳಲ್ಲಿ ಹೊರಗಿನವರ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಓದಿ:ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಶ್ರೀಲಂಕಾ ಸಂಸತ್ತಿನ ಹೊರಗೆ ಬೃಹತ್ ಪ್ರತಿಭಟನೆ: ಸಂಪೂರ್ಣ ವಿವರ ಇಲ್ಲಿದೆ!