ನವದೆಹಲಿ: ತೀವ್ರ ಕುತೂಹಲ ಮೂಡಿಸಿದ್ದ ನೂತನ ರಾಷ್ಟ್ರಪತಿ ಚುನಾವಣೆ ಮತದಾನ ಮುಕ್ತಾಯಗೊಂಡಿದ್ದು, ಇಬ್ಬರು ಅಭ್ಯರ್ಥಿಗಳ ಭವಿಷ್ಯ ಇದೀಗ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ. ಜುಲೈ 21ರಂದು ಫಲಿತಾಂಶ ಹೊರಬೀಳಲಿದೆ. 16ನೇ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್ಡಿಎ ಬೆಂಬಲಿತ ಅಭ್ಯರ್ಥಿ ದ್ರೌಪದಿ ಮುರ್ಮು ಕಣದಲ್ಲಿದ್ದು, ವಿಪಕ್ಷಗಳು ಯಶವಂತ್ ಸಿನ್ಹಾ ಅವರನ್ನ ಅಖಾಡಕ್ಕಿಳಿಸಿದ್ದವು.
ಬೆಳಗ್ಗೆ 10 ಗಂಟೆಗೆ ಆರಂಭವಾದ ಚುನಾವಣೆ ಸಂಜೆ 5 ಗಂಟೆಯವರೆಗೆ ನಡೆದಿದ್ದು, ಒಟ್ಟು 736 ಸಂಸತ್ ಸದಸ್ಯರ ಪೈಕಿ 727 ಸದಸ್ಯರು ಹಾಗೂ 9 ಶಾಸಕಾಂಗ ಅಸೆಂಬ್ಲಿ ಸದಸ್ಯರಿಗೆ ಮತದಾನ ಮಾಡಲು ಚುನಾವಣಾ ಆಯೋಗ ಅನುಮತಿ ನೀಡಿತ್ತು. ಇದರಲ್ಲಿ ಒಟ್ಟು 728 ಸದಸ್ಯರು ವೋಟ್ ಮಾಡಿದ್ದಾರೆ.
ಈ ಮೂಲಕ ಶೇ. 98.91ರಷ್ಟು ಮತದಾನವಾಗಿದೆ ಎಂದು ರಾಜ್ಯಸಭೆ ಪ್ರಧಾನ ಕಾರ್ಯದರ್ಶಿ ಪಿಸಿ ಮೋದಿ ತಿಳಿಸಿದ್ದಾರೆ. ಇಂದಿನ ಚುನಾವಣೆಯಲ್ಲಿ ದೇಶದ 4,033 ಶಾಸಕರಿಗೆ ಗುಪ್ತ ಮತ ಹಾಕುವ ಹಕ್ಕು ನೀಡಲಾಗಿತ್ತು. ಕರ್ನಾಟಕದಲ್ಲಿ ಬಿಜೆಪಿಯ 122, ಕಾಂಗ್ರೆಸ್ನ 70 ಹಾಗೂ ಜೆಡಿಎಸ್ನ 32 ಶಾಸಕರು ಮತ ಚಲಾವಣೆ ಮಾಡಿದ್ದಾರೆ.
ಇದನ್ನೂ ಓದಿರಿ:PPE ಕಿಟ್ನಲ್ಲಿ ಬಂದು ವೋಟ್ ಮಾಡಿದ ಸೀತಾರಾಮನ್, ಆರ್ಕೆ ಸಿಂಗ್!
ಮುಖ್ಯವಾಗಿ ಪ್ರಧಾನಿ ನರೇಂದ್ರ ಮೋದಿ, ಸ್ಪೀಕರ್ ಓಂ ಬಿರ್ಲಾ, ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಮಾಜಿ ಪ್ರಧಾನಿಗಳಾದ ಹೆಚ್ಡಿಡಿ, ಡಾ. ಮನಮೋಹನ್ ಸಿಂಗ್ ವೋಟ್ ಮಾಡಿದ್ದಾರೆ. ಇದರ ಜೊತೆಗೆ ಎಲ್ಲ ರಾಜ್ಯದ ಸಂಸದರು, ಮುಖ್ಯಮಂತ್ರಿಗಳು ಹಾಗೂ ಶಾಸಕರು ತಮ್ಮ ಮತ ಚಲಾಯಿಸಿದ್ದಾರೆ. ಇನ್ನೂ ಕಾಂಗ್ರೆಸ್, ಎನ್ಸಿಪಿ ಸೇರಿ ವಿಪಕ್ಷಗಳ ಕೆಲ ಶಾಸಕರು ಅಡ್ಡ ಮತದಾನ ಮಾಡಿದ್ದಾರೆ.
ವಿವಿಧ ರಾಜ್ಯಗಳಲ್ಲಿ ನಡೆದ ಚುನಾವಣೆಯ ಮತಪೆಟ್ಟಿಗೆ ತೆಗೆದುಕೊಂಡು ಚುನಾವಣಾಧಿಕಾರಿಗಳು ಈಗಾಗಲೇ ದೆಹಲಿಯತ್ತ ಪ್ರಯಾಣ ಬೆಳೆಸಿದ್ದು, ಸಂಸತ್ ಭವನಕ್ಕೆ ಸುರಕ್ಷಿತವಾಗಿ ತರಲು ಎಲ್ಲ ರೀತಿಯ ವ್ಯವಸ್ಥೆ ಮಾಡಲಾಗಿದೆ ಎಂದರು.
ಈ ರಾಜ್ಯಗಳಲ್ಲಿ ಶೇ. 100ರಷ್ಟು ವೋಟಿಂಗ್: ಚುನಾವಣಾ ಆಯೋಗದ ಪ್ರಕಾರ ಛತ್ತೀಸ್ಘಡ,ಗೋವಾ, ಗುಜರಾತ್, ಹಿಮಾಚಲ ಪ್ರದೇಶ, ಕೇರಳ, ಕರ್ನಾಟಕ, ಮಧ್ಯಪ್ರದೇಶ, ಮಣಿಪುರ, ಮಿಜೋರಾಂ, ಪುದುಚೇರಿ, ಸಿಕ್ಕಿಂ ಹಾಗೂ ತಮಿಳುನಾಡಿನಲ್ಲಿ ಶೇ. 100ರಷ್ಟು ವೋಟಿಂಗ್ ಆಗಿದ್ದು, ಎಲ್ಲ ಶಾಸಕರು ತಮ್ಮ ಮತ ಚಲಾವಣೆ ಮಾಡಿದ್ದಾರೆ.