ನವದೆಹಲಿ: ಕೈದಿಯೊಬ್ಬ ಮತದಾನ ಮಾಡುವುದನ್ನು ನಿರ್ಬಂಧಿಸುವ ಪ್ರಜಾಪ್ರತಿನಿಧಿ ಕಾಯ್ದೆಯ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಸೋಮವಾರ ಕೇಂದ್ರ ಮತ್ತು ಚುನಾವಣಾ ಆಯೋಗದಿಂದ ಪ್ರತಿಕ್ರಿಯೆ ಕೇಳಿದೆ.
ಮುಖ್ಯ ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಮತ್ತು ನ್ಯಾಯಮೂರ್ತಿಗಳಾದ ಎಸ್. ರವೀಂದ್ರ ಭಟ್ ಮತ್ತು ಬೇಲಾ ಎಂ. ತ್ರಿವೇದಿ ಅವರನ್ನೊಳಗೊಂಡ ಪೀಠವು ವಕೀಲ ಜೊಹೆಬ್ ಹೊಸೈನ್ ಅವರ ಅರ್ಜಿಗಳ ವಿಚಾರಣೆ ನಡೆಸಿ, ಗೃಹ ಸಚಿವಾಲಯ (ಎಂಎಚ್‌ಎ) ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿ ಮಾಡಿದೆ.
ಜೈಲು ಶಿಕ್ಷೆಗೊಳಗಾದ ವ್ಯಕ್ತಿಯೊಬ್ಬ ಚುನಾವಣೆಯಲ್ಲಿ ಮತ ಚಲಾಯಿಸುವುದನ್ನು ನಿಷೇಧಿಸುವ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 62 (5) ರ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ 2019 ರಲ್ಲಿ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಆದಿತ್ಯ ಪ್ರಸನ್ನ ಭಟ್ಟಾಚಾರ್ಯ ಎಂಬುವರು ಪಿಐಎಲ್ ಸಲ್ಲಿಸಿದ್ದರು. ಈ ಬಗ್ಗೆ ವಿಚಾರಣೆ ನಡೆಸಿದ ಪೀಠ ಡಿಸೆಂಬರ್ 29 ರಂದು ಮುಂದಿನ ವಿಚಾರಣೆ ನಿಗದಿಪಡಿಸಿದೆ.
ಯಾವುದೇ ವ್ಯಕ್ತಿಯು ಬಂಧಿತನಾಗಿ ಜೈಲಿನಲ್ಲಿದ್ದರೆ, ಜೈಲು ಶಿಕ್ಷೆ ಅಥವಾ ಪೋಲೀಸರ ಕಾನೂನುಬದ್ಧ ವಶದಲ್ಲಿದ್ದರೆ ಆತ ಯಾವುದೇ ಚುನಾವಣೆಯಲ್ಲಿ ಮತ ಚಲಾಯಿಸುವಂತಿಲ್ಲ. ಈ ಕಾಯ್ದೆಯ ಸಬ್ ಸೆಕ್ಷನ್ನಲ್ಲಿ ಇರುವ ಯಾವುದೂ ಮುಂಜಾಗ್ರತಾ ಕ್ರಮವಾಗಿ ಬಂಧಿಸಲ್ಪಟ್ಟಿರುವ ವ್ಯಕ್ತಿಗೆ ಅನ್ವಯಿಸುವುದಿಲ್ಲ ಎಂದು ಕಾಯ್ದೆಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಸ್ವಾತಂತ್ರ್ಯೋತ್ಸವ ದಿನ ಇಬ್ಬರು ಮಹಿಳಾ ಕೈದಿ ಸೇರಿ 81 ಶಿಕ್ಷಾ ಬಂಧಿಗಳಿಗೆ ಜೈಲಿನಿಂದ ಮುಕ್ತಿ