ಹೈದರಾಬಾದ್:ಅಪರೂಪದ ವಿದ್ಯಮಾನವೊಂದರಲ್ಲಿ ತೆಲಂಗಾಣ ಮತ್ತು ಮಹಾರಾಷ್ಟ್ರ ಗಡಿಯಲ್ಲಿರುವ ಕೆಲ ಗ್ರಾಮಗಳ ಮತದಾರರು ಎರಡೂ ರಾಜ್ಯಗಳ ಚುನಾವಣೆಗಳಲ್ಲಿ ಮತದಾನ ಮಾಡುತ್ತಾರೆ. ಇವರಿಗೆ ಇಬ್ಬರು ಸಿಎಂಗಳು, ಎರಡು ಚುನಾವಣಾ ಗುರುತಿನ ಚೀಟಿ, ಎರಡು ಪಡಿತರ ಚೀಟಿ, ಎರಡು ಶಾಲೆಗಳು ಸೇರಿದಂತೆ ಎಲ್ಲವೂ ಇಲ್ಲಿ ಎರಡೆರಡು.
ಮಹಾರಾಷ್ಟ್ರ ಮತ್ತು ತೆಲಂಗಾಣ ನಡುವಿನ ಗಡಿ ವಿವಾದ ಬಗೆಹರಿಯದ ಹಿನ್ನೆಲೆ ಈ ರೀತಿಯ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಲ್ಲಿನ ಜನರು ಎರಡು ರಾಜ್ಯಗಳ ಸರ್ಕಾರಗಳಿಂದ ಸವಲತ್ತುಗಳನ್ನು ಪಡೆದುಕೊಳ್ಳುತ್ತಾರೆ. ಆಂಧ್ರದ ಈಗಿನ ಕೊಮರಾಮ್ಭೀಮ್ ಜಿಲ್ಲೆಯ ಕೆರಮೇರಿ ಮಂಡಲಕ್ಕೆ ಸೇರಿರುವ ಪರಂದೋಳಿ, ಕೋಟ, ಶಂಕರಲೊಡ್ಡಿ, ಲೆಂಡಿಜಾಲ, ಮುಕುಡನಗುಡ, ಮಹಾರಾಜಗುಡ, ಅಂತಾಪುರ, ಇಂದ್ರನಗರ, ಪದ್ಮಾವತಿ, ಎಸ್ಸಾಪುರ, ಬೋಳಪತ್ತಾರ್ ಮತ್ತು ಗೌರಿ ಗ್ರಾಮಗಳಿಗಾಗಿ ಮಹಾರಾಷ್ಟ್ರ, ತೆಲಂಗಾಣ ಕಾನೂನು ಹೋರಾಟ ನಡೆಸುತ್ತಿವೆ.
1956 ರಲ್ಲಿ ಭಾಷಾವಾರು ರಾಜ್ಯಗಳ ಮರುವಿಂಗಡಣೆಯ ವೇಳೆ ಈ 12 ಗ್ರಾಮಗಳನ್ನು ಆಂಧ್ರಪ್ರದೇಶದಲ್ಲಿ ಸೇರಿಸಲಾಯಿತು. ಆದರೆ, ಇವು ಭೌಗೋಳಿಕ ಮತ್ತು ಸಾಂಸ್ಕೃತಿಕವಾಗಿ ಮಹಾರಾಷ್ಟ್ರಕ್ಕೆ ಹತ್ತಿರವಾಗಿವೆ. ಈ ಗ್ರಾಮಗಳಲ್ಲಿ 9,246 ಜನಸಂಖ್ಯೆ ಇದ್ದು, ಈ ಪೈಕಿ 3,283 ಮತದಾರರು ಇದ್ದಾರೆ. ಮಹಾರಾಷ್ಟ್ರ ಸರ್ಕಾರ 1987 ರಲ್ಲಿ ಈ ಗ್ರಾಮಗಳನ್ನು ತನ್ನ ಚಂದ್ರಾಪುರ ಜಿಲ್ಲೆಯ ಜಿವಿಟಿ ತಾಲೂಕಿಗೆ ಸೇರಿಸಿಕೊಂಡಿತು. ಬಳಿಕ ಇಲ್ಲಿ ಪಂಚಾಯತ್ ಚುನಾವಣೆಗಳನ್ನು ನಡೆಸಿತ್ತು.