ನವದೆಹಲಿ: 20 ವರ್ಷದ ನಂತರ ಫಿಟ್ನೆಸ್ ಟೆಸ್ಟ್ಗೆ ಒಳಪಡುವ ಪ್ರಯಾಣಿಕ ವಾಹನಗಳು (ಪಿವಿ) ಮತ್ತು 15 ವರ್ಷಕ್ಕಿಂತ ಹಳೆಯದಾದ ಕಮರ್ಷಿಯಲ್ ವಾಹನಗಳಿಗಾಗಿ ನಿರ್ಮಲಾ ಸೀತಾರಾಮನ್ ಅವರು ಸ್ವಯಂಕೃತ ಹಳೆಯ ವಾಹನಗಳ ಗುಜರಿ ನೀತಿ ಘೋಷಿಸಿದರು.
ಹೆಚ್ಚಿನ ಮಾಲಿನ್ಯಕ್ಕೆ ಸಂಬಂಧಿಸಿದಂತೆ ಹಳೆಯ ವಾಹನಗಳು ಹೊರಸೂಸುವ ಹೊಗೆಯನ್ನು ತಡೆಯಲು ಮತ್ತು ಜನರ ಬಳಕೆಯ ಉತ್ತೇಜನ ತಗ್ಗಿಸಲು ಹಳೆಯ ವಾಹನ ತಡೆ ನೀತಿಯ ಒಪ್ಪಿಗೆಗಾಗಿ ಕೇಂದ್ರ ಸಚಿವ ಸಂಪುಟಕ್ಕೆ ಕರಡು ಪ್ರಸ್ತಾವನೆಯನ್ನು ಕಳುಹಿಸಲಾಗಿದೆ ಎಂದು ಮೂಲಗಳು ತಿಳಿಸಿದ್ದವು.
15 ವರ್ಷಗಳ ಹಳೆಯ ವಾಹನಗಳು ಈಗಿನ ವಾಹನಗಳಿಗೆ ಹೋಲಿಸಿದರೆ ಹೆಚ್ಚಿನ ಪ್ರಮಾಣದಲ್ಲಿ ಹೊಗೆ ಹೊರಸೂಸುತ್ತವೆ. ಇವುಗಳು ವಾತಾವರಣದ ಮಾಲಿನ್ಯಕ್ಕೆ ಕಾರಣವಾಗುತ್ತಿವೆ. ಜೊತೆಗೆ ರಸ್ತೆಯ ಅಪಘಾತಕ್ಕೂ ಕಾರಣವಾಗುತ್ತಿವೆ ಎಂದು ಹಳೆಯ ವಾಹನಗಳ ಬಳಕೆಯನ್ನು ಕಡಿಮೆಗೊಳಿಸುವ ಉದ್ದೇಶವಿದೆ ಎಂದು ನೀತಿಯಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗೆ ವಾಹನಗಳ ಹೊಗೆ ಹೊರಸೂಸುವಿಕೆಗೆ ಸಂಬಂಧ ಹೊಸ ಮಾನದಂಡಗಳು ಜಾರಿಗೆ ಬಂದಿವೆ. ಇದಕ್ಕೆ ಅನುಗುಣವಾಗಿ ಹಳೆಯ ವಾಹನಗಳು ಹೊಂದಿಕೊಳ್ಳುವುದಿಲ್ಲ. ಹೀಗಾಗಿ, ಹಳೆಯ ವಾಹನಗಳ ನೋಂದಣಿ, ಸಾರಿಗೆ ಅರ್ಹತೆಯ ಶುಲ್ಕ ಏರಿಸುವುದು ಪ್ರಸ್ತಾವನೆಯಲ್ಲಿವೆ.
ಹಳೆಯ ವಾಹನಗಳ ಗುಜರಿ ಕೇಂದ್ರಗಳನ್ನು ಸ್ಥಾಪಿಸಲು ಕೇಂದ್ರ ಉಕ್ಕು ಸಚಿವಾಲಯ ಚಿಂತನೆ ನಡೆಸಿದೆ. ಗುಜರಿಗೆ ಹಾಕಿದ ವಾಹನಗಳ ಬಗ್ಗೆ ಇದು ಮಾಹಿತಿ ಪಡೆದುಕೊಂಡು ಇದರ ಮೇಲೆ ನಿಗಾ ಇರಿಸಲಿದೆ. ಹಳೆಯ ವಾಹನಗಳನ್ನು ಗುಜರಿಗೆ ಹಾಕಿದರೆ ಅದರ ಮಾಲೀಕರು ಹೊಸ ವಾಹನ ಖರೀದಿಸುವಾಗ ವಿತರಕರು ವಿಶೇಷ ರಿಯಾಯಿತಿ ನೀಡಲಿದ್ದಾರೆ. ಇದಕ್ಕೆ ಮಾನ್ಯತೆ ಪಡೆದ ಗುಜರಿ ಕೇಂದ್ರದ ಪ್ರಮಾಣಪತ್ರ ಅಗತ್ಯವಿದೆ ಎಂಬುದು ಸಹ ನೀತಿಯಲ್ಲಿದೆ.