ಡಯಾಬಿಟಿಸ್ ಜನರನ್ನು ಬಿಡದೇ ಕಾಡುವ ಹೆಮ್ಮಾರಿ ಕಾಯಿಲೆ. ಟೈಪ್ 2 ಡಯಾಬಿಟಿಸ್ ವಿಶ್ವಾದ್ಯಂತ ಸುಮಾರು 480 ಮಿಲಿಯನ್ ಜನರ ಮೇಲೆ ಪರಿಣಾಮ ಬೀರುತ್ತಿದೆಯಂತೆ. 2045 ರ ವೇಳೆಗೆ 700 ಮಿಲಿಯನ್ ಜನರಲ್ಲಿ ಡಯಾಬಿಟಿಸ್ ಟೈಪ್ - 2 ಅಂಟಿಕೊಳ್ಳಲಿದೆ ಎಂದು ಅಂದಾಜು ಮಾಡಲಾಗಿದೆ.
ವಿಟಮಿನ್ ಡಿ ಕೊರತೆಯು ಭವಿಷ್ಯದ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕೆಲವು ಅಧ್ಯಯನಗಳಿಂದ ಗೊತ್ತಾಗಿದೆ. ಈ ಮಧ್ಯೆ ವಿಟಮಿನ್ ಡಿ ಪೂರಕಗಳ ಪ್ರಯೋಗಗಳು ಅಸಮಂಜಸ ಫಲಿತಾಂಶಗಳನ್ನು ನೀಡಿವೆ. BMJ ಪ್ರಕಟಿಸಿದ ಹೊಸ ಅಧ್ಯಯನದ ಪ್ರಕಾರ ವಯಸ್ಕರರಲ್ಲಿ ಪೂರಕಗಳು ಪ್ರಾಯೋಗಿಕವಾಗಿ ಅರ್ಥಪೂರ್ಣ ಪರಿಣಾಮ ಬೀರಿಲ್ಲ ಎಂದು ಕಂಡುಕೊಳ್ಳಲಾಗಿದೆ. ಆದರೆ ಸಾಕಷ್ಟು ಇನ್ಸುಲಿನ್ ಸ್ರವಿಸುವಿಕೆ ಹೊಂದಿರುವ ಜನರಿಗೆ ವಿಟಮಿನ್ ಡಿ ಯಿಂದ ಉಪಯೋಗವಿದೆ. ಆದಾಗ್ಯೂ ಈ ಸಂಶೋಧನೆ ಈ ಬಗ್ಗೆ ಸ್ಪಷ್ಟತೆಗೆ ಬರುವಲ್ಲಿ ವಿಫಲವಾಗಿದೆ ಎಂದು ತಿಳಿದು ಬಂದಿದೆ.
ಈ ಸಂಬಂಧ ಅಧ್ಯಯನ ನಡೆಸಿದ ತಂಡವು, ಜಪಾನ್‌ನಲ್ಲಿ ಆಸ್ಟಿಯೊಪೊರೋಸಿಸ್‌ಗೆ ಚಿಕಿತ್ಸೆ ನೀಡಲು ಬಳಸುವ ವಿಟಮಿನ್ ಡಿ ಯ ಸಕ್ರಿಯ ರೂಪವಾದ ಎಲ್ಡೆಕಾಲ್ಸಿಟಾಲ್ ಹಾಗೂ ದುರ್ಬಲಗೊಂಡ ಗ್ಲೂಕೋಸ್ ಹೊರ ಹಾಕುವ ಸಾಮರ್ಥ್ಯ ಹೊಂದಿರುವ ಜನರಲ್ಲಿ ಟೈಪ್ 2 ಮಧುಮೇಹ ಹಬ್ಬುವ ಅಪಾಯವನ್ನು ಕಡಿಮೆ ಮಾಡುತ್ತದೆ ಎಂಬ ಅಂಶವನ್ನು ಪತ್ತೆ ಹಚ್ಚಿದೆ.