ತಿರುನೆಲ್ವೇಲಿ (ತಮಿಳುನಾಡು):ಅದು ಭಯಾನಕ ಕಾಡು, ಆ ಕಾಡಿನ ಮಧ್ಯೆಯೊಂದು ಪುಟ್ಟ ಗುಡಿಸಲು. ಅದೇ ಗುಡಿಸಲಲ್ಲಿ ಯಾರ ಮೇಲೂ ಅವಲಂಬಿತವಾಗದೇ ತಾಯಿ ಜೊತೆ ತೃಪ್ತಿ ಜೀವನ ನಡೆಸುತ್ತಿರುವ ಅಂಧ ಮಗ. ಇದು ಯಾವುದೋ ಸಿನಿಮಾವಲ್ಲ. ತಮಿಳುನಾಡಿನಲ್ಲಿ ಕಂಡು ಬಂದಿರುವ ನೈಜ ಕಥೆ. ಹೌದು, ಆತ ತನ್ನ ಸಣ್ಣ ಪ್ರಾಯದಲ್ಲೇ ಅನಾರೋಗ್ಯದಿಂದ ತನ್ನ 2 ಕಣ್ಣನ್ನು ಕಳೆದುಕೊಳ್ಳುತ್ತಾನೆ. ದೃಷ್ಟಿ ಹೋದರೂ ಎದೆಗುಂದದೇ ತಾಯಿಯ ಪ್ರೋತ್ಸಾಹದಿಂದ ಕಷ್ಟಪಟ್ಟು ದುಡಿದು ಕೃಷಿ ಮಾಡಿ ಸ್ವಾವಲಂಬಿ ಜೀವನ ನಡೆಸುತ್ತಿದ್ದಾನೆ.
ಈತನ ಹೆಸರೇ ಮುರುಗೇಶನ್. ಸಣ್ಣ ಪುಟ್ಟ ಕೊರತೆಗೆ ಜೀವನವನ್ನು ಕೊನೆಗೊಳಿಸುವ ಅದೆಷ್ಟೋ ಜನರಿಗೆ ಮಾದರಿ ಈ ವ್ಯಕ್ತಿ. ದೃಷ್ಟಿ ಅಂಧವಾದರೂ ಕೃಷಿಯಲ್ಲೇ ಜೀವನ ಕಟ್ಟಿಕೊಂಡಿರುವ ಮುರುಗೇಶನ್ ಪ್ರತಿ ದಿನ ಎದ್ದು ಕೈಯಲ್ಲಿ ಹಾರೆಯನ್ನು ಹಿಡಿದು ಕೃಷಿ ಚಟುವಟಿಕೆಯಲ್ಲಿ ತೊಡಗುತ್ತಾನೆ. ತಮಗಿರುವ ಕೇವಲ ಅರ್ಧ ಎಕರೆ ಜಮೀನಿನಲ್ಲಿ ಮರಗೆಣಸು, ಕಾಳು ಮೆಣಸು, ಬಾಳೆಗಿಡ ಬೆಳೆಸಿ ಇದರ ಲಾಭದಲ್ಲೇ ಬದುಕು ನಡೆಸುತ್ತಿದ್ದಾರೆ. ಮೂಲಭೂತ ಸೌರ್ಕರ್ಯಗಳಿಂದಲೂ ವಂಚಿತರಾಗಿರುವ ಇವರು ಕೇವಲ ಟರ್ಪಲ್ನಲ್ಲಿಯೇ ಮುಚ್ಚಿದ್ದ ಮಣ್ಣಿನ ನಾಲ್ಕು ಗೋಡೆಯ ಮಧ್ಯೆ ಮಳೆ, ಬಿಸಿಲು, ಚಳಿಗೂ ಅಂಜದೇ ಒಬ್ಬರಿಗೊಬ್ಬರು ಬೆನ್ನೆಲುಬಾಗಿದ್ದಾರೆ.
ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಪೆರಿಯಾ ಮೈಲಾರ್ ಪಶ್ಚಿಮ ಘಟ್ಟಗಳಲ್ಲಿರುವ ಚಿಕ್ಕ ಐದು ಕುಗ್ರಾಮಗಳಲ್ಲಿ ಒಂದು. ಇಲ್ಲಿ ಮುರುಗೇಶ್ ಸೇರಿ ಒಂಬತ್ತು ಕುಟುಂಬಗಳು ಇವೆ. ಈ ಕುಟುಂಬಗಳು ಪಡಿತರ ಪಡೆಯಲು ಮತ್ತು ಉತ್ಪನ್ನಗಳನ್ನು ಮಾರಾಟ ಮಾಡಲು ಕಿಲೋಮೀಟರ್ಗಟ್ಟಲೇ ಬರಲೇಬೇಕು. ಮುರುಗೇಶ್ ತಾಯಿ ಪಾಂಡಿಯಮ್ಮಾಳ್. ಈಕೆಯ ಪತಿ ಇವರನ್ನು ಬಿಟ್ಟು ಬೇರೆ ಮಹಿಳೆಯನ್ನು ವಿವಾಹವಾದರು. ಮಗ ಮುರುಗೇಶ್ ಒಂದೂವರೆ ವರ್ಷದವನಿದ್ದಾಗ ತೀವ್ರ ಜ್ವರ ಬಂದು ಎರಡೂ ಕಣ್ಣುಗಳ ದೃಷ್ಟಿ ಕಳೆದುಹೋಗುತ್ತದೆ. ಅಲ್ಲಿಂದ ಸಿಂಗಲ್ ಪೇರಂಟ್ ಆಗಿರುವ ಪಾಂಡಿಯಮ್ಮಾಳ್ ತನ್ನ ಮಗನನ್ನು ಸಾಕುತ್ತಾರೆ. ತಾಯಿಯ ಜೊತೆ ಮುರುಗೇಶ್ ಕೃಷಿಯಲ್ಲಿ ತೊಡಗಿ ಇದರಲ್ಲೇ ಹೆಚ್ಚಿನ ಆಸಕ್ತಿ ಹೊಂದುತ್ತಾನೆ. ಅಂದಿನ ಸಮಯದಲ್ಲಿ ಈ ಪ್ರದೇಶದಲ್ಲಿ ವೈದ್ಯಕೀಯ ಸೌಲಭ್ಯವಿಲ್ಲದೇ ಮಗ ಅಂಧನಾಗುತ್ತಾನೆ. ಆದರೂ ಛಲ ಬಿಡದ ತಾಯಿ ತನ್ನ ಮಗನನ್ನು ಕೊರತೆಗಳ ನಡುವೆ ಸಬಲನಾಗಿ ಬೆಳೆಸುತ್ತಾಳೆ. ಇದೇ ಕಾಡೊಳಗೆ ಯಾರಿಗೂ ಅಂಗಲಾಚದೆ ಜೀವನ ನಡೆಸುತ್ತಿದ್ದಾರೆ.