ನವದೆಹಲಿ:ಜನಾಂಗೀಯ ಸಂಘರ್ಷದಿಂದ ಹೊತ್ತಿ ಉರಿಯುತ್ತಿರುವ ಮಣಿಪುರಕ್ಕೆ ಇಂದು ಮತ್ತು ನಾಳೆ ವಿಪಕ್ಷಗಳ ನಿಯೋಗ ಭೇಟಿ ನೀಡಲಿದೆ. ಇಲ್ಲಿನ ಪರಿಸ್ಥಿತಿಯನ್ನು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ಬಳಿಕ ಸಂಸತ್ ಅಧಿವೇಶನದಲ್ಲಿ ಈ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಶ್ನಿಸುವ ಇರಾದೆ ಹೊಂದಿದೆ.
26 ವಿಪಕ್ಷಗಳು ಸೇರಿಕೊಂಡು ರಚಿಸಿಕೊಂಡಿರುವ ಇಂಡಿಯನ್ ನ್ಯಾಶನಲ್ ಡೆವಲಪ್‌ಮೆಂಟಲ್ ಇನ್‌ಕ್ಲೂಸಿವ್ ಅಲೈಯನ್ಸ್ನ (ಇಂಡಿಯಾ) ಪೈಕಿ 16 ಪಕ್ಷಗಳ 20 ಸದಸ್ಯರ ನಿಯೋಗವು ಶನಿವಾರ ಮತ್ತು ಭಾನುವಾರ ಎರಡು ದಿನ ಮಣಿಪುರಕ್ಕೆ ಭೇಟಿ ನೀಡಲಿದೆ.
ಸಂಸದರ ನಿಯೋಗವು ಹಿಂಸಾಚಾರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಹಿಂಸಾಚಾರಕ್ಕೆ ಗುರಿಯಾದ ಜನರೊಂದಿಗೆ ಸಂವಾದ ನಡೆಸಲಿದೆ. ಸಂತ್ರಸ್ತರಿಗೆ ಧೈರ್ಯ ತುಂಬಲು ವಿರೋಧ ಪಕ್ಷದ ಸಂಸದರು ಪರಿಹಾರ ಶಿಬಿರಗಳಿಗೆ ಭೇಟಿ ನೀಡಿ ಅವರ ಸ್ಥಿತಿಗತಿ ವಿಚಾರಿಸಲಿದ್ದಾರೆ. ಬಳಿಕ ಭಾನುವಾರದಂದು ರಾಜ್ಯಪಾಲರನ್ನು ಭೇಟಿ ಮಾಡಲು ಪ್ರತಿಪಕ್ಷಗಳ ನಿಯೋಗ ನಿರ್ಧರಿಸಿದೆ.
ನಿಯೋಗದಲ್ಲಿರುವ ಸಂಸದರು:ಸಂಸದರ ನಿಯೋಗದಲ್ಲಿ ಲೋಕಸಭೆಯ ಪ್ರತಿಪಕ್ಷ ನಾಯಕ ಅಧೀರ್ ರಂಜನ್ ಚೌಧರಿ, ಗೌರವ್ ಗೊಗೊಯ್, ರಾಜೀವ್ ರಂಜನ್ ಲಾಲನ್ ಸಿಂಗ್, ಕನಿಮೋಳಿ ಕರುಣಾನಿಧಿ, ಸುಶ್ಮಿತಾ ದೇವ್, ಸಂತೋಷ್ ಕುಮಾರ್, ಎಎ ರಹೀಮ್, ಪ್ರೊ ಮನೋಜ್ ಕುಮಾರ್ ಝಾ, ಮಹುವಾ ಮಜಿ, ಜಾವೇದ್ ಅಲಿ ಖಾನ್, ಪಿಪಿ ಮೊಹಮ್ಮದ್ ಫೈಜಲ್, ಅನೀಲ್ ಪ್ರಸಾದ್ ಹೆಗ್ಡೆ, ಇಟಿ ಮೊಹಮ್ಮದ್ ಬಶೀರ್, ಎನ್‌ಕೆ ಪ್ರೇಮಚಂದ್ರನ್, ಸುಶೀಲ್ ಗುಪ್ತಾ, ಡಿ ರವಿಕುಮಾರ್, ಅರವಿಂದ್ ಸಾವಂತ್, ತಿರು ತೋಲ್ ತಿರುಮಾವಲವನ್, ಜಯಂತ್ ಸಿಂಗ್ ಮತ್ತು ಫುಲೋ ದೇವಿ ನೇತಮ್ ಇರಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.