ರಾಯಪುರ( ಛತ್ತೀಸ್ಗಢ) :ಇತ್ತೀಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಛತ್ತೀಸ್ಗಢದಲ್ಲಿ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಬಳಿಕ ಛತ್ತೀಸ್ಗಢದಲ್ಲಿ ಯಾರು ಮುಖ್ಯಮಂತ್ರಿ ಗದ್ದುಗೆ ಏರುತ್ತಾರೆ ಎಂಬ ಬಗ್ಗೆ ತೀವ್ರ ಕುತೂಹಲ ಮೂಡಿತ್ತು. ಇಂದು ನಡೆದ ಶಾಸಕಾಂಗ ಸಭೆಯಲ್ಲಿ ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿಯಾಗಿ ವಿಷ್ಣುದೇವ್ ಸಾಯಿ ಅವರನ್ನು ಆಯ್ಕೆ ಮಾಡಲಾಗಿದೆ.
ರಾಯಪುರ ತಲುಪಿದ ಬಿಜೆಪಿ ಕೇಂದ್ರ ವೀಕ್ಷಕರು: ಇದಕ್ಕೂ ಮುನ್ನ ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವ ಸಲುವಾಗಿ ಕೇಂದ್ರದಿಂದ ಬಿಜೆಪಿ ವೀಕ್ಷಕರು ರಾಯಪುರಕ್ಕೆ ಬಂದಿದ್ದರು. ಇದರಲ್ಲಿ ಕೇಂದ್ರ ಸಚಿವರಾದ ಸರ್ಬಾನಂದ ಸೋನೋವಾಲ್, ಅರ್ಜುನ್ ಮುಂಡಾ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ದುಷ್ಯಂತ್ ಗೌತಮ್ ಇದ್ದರು. ವೀಕ್ಷಕರು ರಾಯಪುರ ವಿಮಾನ ನಿಲ್ದಾಣ ತಲುಪುತ್ತಿದ್ದಂತೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸ್ವಾಗತ ಕೋರಿದರು. ರಾಯಪುರ ಬಿಜೆಪಿಗೆ ಕಚೇರಿಗೆ ಆಗಮಿಸಿದ ಕೇಂದ್ರದ ವೀಕ್ಷಕರನ್ನು ರಾಜ್ಯ ಬಿಜೆಪಿ ಅಧ್ಯಕ್ಷ ಅರುಣ್ ಸಾವೋ ಸ್ವಾಗತಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ್ದ ಕೇಂದ್ರ ಸಚಿವ ಅರ್ಜುನ್ ಮುಂಡಾ, ರಾಜ್ಯದಲ್ಲಿ ಬಿಜೆಪಿಗೆ ಪೂರ್ಣ ಬಹುಮತ ಲಭಿಸಿದೆ. ಇದೀಗ ಸರ್ಕಾರ ರಚನೆ ಮಾಡಬೇಕಿದೆ. ಈ ಸಂಬಂಧ ಶಾಸಕಾಂಗ ಸಭೆಯನ್ನು ಕರೆಯಲಾಗಿದ್ದು, ಇಲ್ಲಿ ಶಾಸಕಾಂಗ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದ್ದರು.
ಛತ್ತೀಸ್ಗಢ ನೂತನ ಸಿಎಂ ವಿಷ್ಣುದೇವ್ ಸಾಯಿ: ರಾಯಪುರದಲ್ಲಿ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ವಿಷ್ಣುದೇವ್ ಸಾಯಿ ಅವರನ್ನು ಛತ್ತೀಸ್ಗಡದ ನೂತನ ಸಿಎಂ ಆಗಿ ಆಯ್ಕೆ ಮಾಡಲಾಗಿದೆ. ಸಭೆಯಲ್ಲಿ ಕೇಂದ್ರದ ಮೂವರು ವೀಕ್ಷಕರು ಭಾಗಿಯಾಗಿದ್ದರು. ಎಲ್ಲಾ ಬಿಜೆಪಿ ಶಾಸಕರ ಜೊತೆ ಕೇಂದ್ರದ ವೀಕ್ಷಕರು ಮಾತುಕತೆ ನಡೆಸಿದರು. ಈ ವೇಳೆ ಬಿಜೆಪಿ ಶಾಸಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ಅಂತಿಮವಾಗಿ ಕೇಂದ್ರದ ಮೂವರು ವೀಕ್ಷಕರ ಸಮ್ಮುಖದಲ್ಲಿ ಸಿಎಂ ಆಗಿ ವಿಷ್ಣುದೇವ್ ಸಾಯಿ ಅವರನ್ನು ಅಂತಿಮಗೊಳಿಸಲಾಯಿತು. ಒಟ್ಟು 54 ಬಿಜೆಪಿ ಶಾಸಕರು ವಿಷ್ಣುದೇವ್ ಸಾಯಿ ಆಯ್ಕೆಗೆ ಸಮ್ಮತಿ ಸೂಚಿಸಿದರು. ಈ ಶಾಸಕಾಂಗ ಸಭೆಯ ನಿರ್ಧಾರದ ಬಗ್ಗೆ ಕೇಂದ್ರದ ವೀಕ್ಷಕರು ಹೈಕಮಾಂಡ್ಗೆ ಮಾಹಿತಿ ನೀಡಿದ್ದಾರೆ. ವಿಷ್ಣುದೇವ್ ಸಾಯಿ ಅವರನ್ನು ಸಿಎಂ ಆಗಿ ಆಯ್ಕೆ ಮಾಡಿದ ಬೆನ್ನಲ್ಲೇ ಬಿಜೆಪಿ ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.
ವಿಷ್ಣುದೇವ್ ಸಾಯಿ ಹಿನ್ನೆಲೆ: ವಿಷ್ಣುದೇವ್ ಸಾಯಿ ಅವರು ಛತ್ತೀಸ್‌ಗಢದ ಪ್ರಮುಖ ರಾಜಕಾರಣಿಗಳಲ್ಲಿ ಒಬ್ಬರು. ಆದಿವಾಸಿ ಜನಾಂಗಕ್ಕೆ ಸೇರಿದ ಸಾಯಿ ಅವರಿಗೆ ರಾಜಕೀಯದಲ್ಲಿ ಹಲವು ದಶಕಗಳ ಅನುಭವ ಇದೆ. 1999ರಿಂದ 2014ರ ವರೆಗೆ ರಾಯಗಢದಿಂದ ಸಂಸದರಾಗಿ ಆಯ್ಕೆಯಾಗಿದ್ದರು. ಅಲ್ಲದೆ 2 ಬಾರಿ ಶಾಸಕರಾಗಿಯೂ ಆಯ್ಕೆಯಾಗಿದ್ದಾರೆ. ಮೋದಿ ಸರ್ಕಾರದಲ್ಲಿ ಕೇಂದ್ರ ಮಂತ್ರಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಕುನ್ಕುರಿ ವಿಧಾನಸಭಾ ಕ್ಷೇತ್ರದಿಂದ ವಿಷ್ಣುದೇವ್ ಸಾಯಿ ಭರ್ಜರಿ ಗೆಲುವು ದಾಖಲಿಸಿದ್ದರು. ಚುನಾವಣೆಗೂ ಮುನ್ನವೇ ಭರ್ಜರಿ ಪ್ರಚಾರ ನಡೆಸಿದ್ದ ಸಾಯಿ, ಜಾಶ್ಪುರದ ಮೂರು ಕ್ಷೇತ್ರಗಳಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸುವಲ್ಲಿ ಶ್ರಮಿಸಿದ್ದಾರೆ. ಈ ಮೂಲಕ ಸುರ್ಗುಜಾದ 14 ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ. ಕಾಂಗ್ರೆಸ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿ ಆಗಿದ್ದ ಟಿಎಸ್ ಸಿಂಗ್ದೇವ್ ಅವರು ಅಂಬಿಕಾಪುರ್ ಕ್ಷೇತ್ರದಿಂದ ಸೋಲುಂಡಿದ್ದಾರೆ.
ಇದನ್ನೂ ಓದಿ :ಸಂಸದರ ಅನರ್ಹತೆ ಮತ್ತು ಹೊರಹಾಕುವಿಕೆ: ಈ ಎರಡರ ನಡುವಿನ ವ್ಯತ್ಯಾಸವೇನು? ಇಲ್ಲಿದೆ ಮಾಹಿತಿ