ನವದೆಹಲಿ : 2023 ರ ಮೇ ಮೊದಲ ವಾರದಿಂದ ಮಣಿಪುರದಲ್ಲಿ ನಡೆಯುತ್ತಿರುವ ಹಿಂಸಾತ್ಮಕ ಕೃತ್ಯಗಳನ್ನು ಮಟ್ಟಹಾಕಲು ಎರಡು ಸಮಿತಿಗಳನ್ನು ರಚಿಸಲಾಗಿದ್ದು, ಈ ಕುರಿತು ವರದಿ ಸಲ್ಲಿಸಲು ಎರಡು ತಿಂಗಳ ಕಾಲಾವಕಾಶ ನೀಡಲಾಗಿದೆ. ಹಾಗೆಯೇ, ಕೋಮು ಸಂಘರ್ಷದ ಸಂದರ್ಭದಲ್ಲಿ ಮಹಿಳೆಯರು ಲೈಂಗಿಕ ದೌರ್ಜನ್ಯದ ಗಂಭೀರ ಸಮಸ್ಯೆಗಳಿಗೆ ಒಳಗಾಗಿರುವುದಕ್ಕೆ ಸುಪ್ರೀಂ ಕೋರ್ಟ್ ಬೇಸರ ವ್ಯಕ್ತಪಡಿಸಿದೆ.
ಈ ಕುರಿತು ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, "ಮಹಿಳೆಯರನ್ನು ಲೈಂಗಿಕ ಅಪರಾಧ ಮತ್ತು ಹಿಂಸಾಚಾರ ಕೃತ್ಯಗಳಿಗೆ ಬಳಸಿಕೊಳ್ಳುವುದು ಸ್ವೀಕಾರಾರ್ಹವಲ್ಲ. ಇದು ಘನತೆ, ವೈಯಕ್ತಿಕ ಸ್ವಾತಂತ್ರ್ಯ ಮತ್ತು ಸ್ವಾಯತ್ತತೆಯ ಸಾಂವಿಧಾನಿಕ ಮೌಲ್ಯಗಳ ಗಂಭೀರ ಉಲ್ಲಂಘನೆಯಾಗಿದೆ ಎಂದು ಸಂವಿಧಾನದ ಭಾಗ III ರಲ್ಲಿ ತಿಳಿಸಲಾಗಿದೆ. ಜೊತೆಗೆ, ಘರ್ಷಣೆಯ ಸಮಯದಲ್ಲಿ ಮಹಿಳೆಯರ ಮೇಲೆ ಇಂತಹ ಭೀಕರ ದೌರ್ಜನ್ಯ ಎಸಗುವುದು ದೌರ್ಜನ್ಯವಲ್ಲದೇ ಮತ್ತೇನೂ ಅಲ್ಲ. ಇಂತಹ ಹಿಂಸಾತ್ಮಕ ಕೃತ್ಯ ಎಸಗುವುದನ್ನು ತಡೆಯುವುದು ಮತ್ತು ಹಿಂಸಾಚಾರಕ್ಕೆ ಒಳಗಾಗುವರನ್ನು ರಕ್ಷಿಸುವುದು ರಾಜ್ಯದ ಪ್ರಮುಖ ಕರ್ತವ್ಯವಾಗಿದೆ" ಎಂದು ತಿಳಿಸಿದೆ.
ಹಾಗೆಯೇ, ಗುರುವಾರ ಸಂಜೆ ತಡವಾಗಿ ಬಿಡುಗಡೆಯಾದ ಆಗಸ್ಟ್ 7 ರ ಆರ್ಡರ್ ಶೀಟ್ ಪ್ರಕಾರ, "ಮಣಿಪುರದಲ್ಲಿ ನಡೆದ ಸಂಘರ್ಷದ ಸಂದರ್ಭದಲ್ಲಿ ಕೆಲವು ಪೊಲೀಸ್ ಅಧಿಕಾರಿಗಳು ಸಹ ಹಿಂಸಾಚಾರ (ಲೈಂಗಿಕ ಹಿಂಸೆ ಸೇರಿದಂತೆ) ನಡೆಸಲು ದುಷ್ಕರ್ಮಿಗಳೊಂದಿಗೆ ಸಹಕರಿಸಿದ್ದಾರೆ ಎಂಬ ಆರೋಪಗಳ ಕುರಿತು ಸಹ ತನಿಖೆ ಮಾಡಲು ಕೋರ್ಟ್ ಸೂಚಿಸಿದೆ. ಇದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರವು ಅಗತ್ಯವಿರುವ ಸಹಕಾರ ಒದಗಿಸಬೇಕು ಎಂದು ನಿರ್ದೇಶನ ನೀಡಿದೆ.