ನವದೆಹಲಿ: ಓಯೋ ರೂಮ್ಸ್ ಅಡಿಯಲ್ಲಿ ಪಟ್ಟಿ ಮಾಡಲಾದ ದೆಹಲಿಯ ಹೋಟೆಲ್‌ನಲ್ಲಿ ವಿವಾದಾತ್ಮಕ ಘಟನೆಯೊಂದು ನಡೆದಿದೆ ಎನ್ನಲಾಗ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಘಟನೆಯ ವಿಡಿಯೋವೊಂದು ಭಾರಿ ಸದ್ದು ಮಾಡುತ್ತಿದೆ. ಕಾಶ್ಮೀರಿ ವ್ಯಕ್ತಿಯೊಬ್ಬರಿಗೆ ವಸತಿ ನಿರಾಕರಿಸಿದ ಆರೋಪದ ಮೇಲೆ ಸಾಮಾಜಿಕ ಮಾಧ್ಯಮದಲ್ಲಿ ಬಿಸಿ ಬಿಸಿ ಚರ್ಚೆ ನಡೆಯುತ್ತಿದೆ. ವಿಡಿಯೋದಲ್ಲಿ ಇರುವಂತೆ, ಹೋಟೆಲ್ ರಿಸೆಪ್ಶನ್‌ನಲ್ಲಿ ಮಹಿಳಾ ಉದ್ಯೋಗಿಯೊಬ್ಬರು ಕಾಶ್ಮೀರಿ ನಿವಾಸಿಗೆ ಆಧಾರ್ ಕಾರ್ಡ್ ಸೇರಿದಂತೆ ತನ್ನ ಗುರುತಿನ ಪುರಾವೆಗಳನ್ನು ತೋರಿಸಿದ ನಂತರವೂ ಚೆಕ್-ಇನ್ ಮಾಡಲು ಅನುವು ಮಾಡಿಲ್ಲ. ಈ ವ್ಯಕ್ತಿ ಆನ್ಲೈನ್ನಲ್ಲಿ ರೂಂ ಬುಕ್ ಮಾಡಿದ್ದರು ಎನ್ನಲಾಗ್ತಿದೆ.
ಈ ವೇಳೆ ಮಹಿಳೆ ಹೋಟೆಲ್ನ ಹಿರಿಯ ಸಿಬ್ಬಂದಿಯೊಂದಿಗೆ ಈ ಸಂಬಂಧ ಮಾತನಾಡಿದ್ದು, ಹೋಟೆಲ್‌ನಲ್ಲಿ ಕಾಶ್ಮೀರಿ ನಿವಾಸಿಗಳಿಗೆ ಅವಕಾಶ ನೀಡದಂತೆ ದೆಹಲಿ ಪೊಲೀಸರು ಸೂಚಿಸಿದ್ದಾರೆ ಎಂದು ಹೇಳಿದ್ದಾರೆ. ಇದೆಲ್ಲವನ್ನು ವಿಡಿಯೋದಲ್ಲಿ ಕಾಣಬಹುದು. ಜಮ್ಮು ಮತ್ತು ಕಾಶ್ಮೀರ್ ವಿದ್ಯಾರ್ಥಿಗಳ ಸಂಘದ ರಾಷ್ಟ್ರೀಯ ವಕ್ತಾರ ನಾಸಿರ್ ಖುಹಮಿ ಈ ಪ್ರಕರಣವನ್ನು ಬೆಳಕಿಗೆ ತಂದಿದ್ದಾರೆ. ಘಟನೆಯ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿರುವ ಅವರು ಇದು ' ದಿ ಕಾಶ್ಮೀರ್ ಫೈಲ್ಸ್' ಪರಿಣಾಮ ಎಂದಿದ್ದಾರೆ.