ನವದೆಹಲಿ: ದೆಹಲಿಯಲ್ಲಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಯೊಬ್ಬರು ಕೊರಿಯಾ ಪ್ರಜೆಯಿಂದ 5000 ರೂಪಾಯಿ ಲಂಚ ಪಡೆಯುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಇದರ ಬೆನ್ನಲ್ಲೇ ಆರೋಪಿ ಪೊಲೀಸನನ್ನು ಅಮಾನತುಗೊಳಿಸಲಾಗಿದೆ. ಕೊರಿಯನ್ ಪ್ರಜೆ ತನ್ನ ಕಾರಿನೊಳಗೆ ಅಳವಡಿಸಲಾಗಿದ್ದ ಕ್ಯಾಮೆರಾದಲ್ಲಿ ಲಂಚದ ಇಡೀ ಘಟನೆಯನ್ನು ಚಿತ್ರೀಕರಿಸಿದ್ದಾನೆ.
ದೆಹಲಿ ಪೊಲೀಸ್ವೊಬ್ಬರು ವಿದೇಶಿಗನಿಂದ 5000 ರೂಪಾಯಿ ಹಣ ಪಡೆದರು. ಆದರೆ, ಅವರಿಗೆ ರಸೀದಿಯನ್ನು ಸಹ ನೀಡಿಲ್ಲ ಎಂದು ಬಿಂಬಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಹರಿದಾಡಿದೆ. ಈ ಸಾಮಾಜಿಕ ಮಾಧ್ಯಮದ ಪೋಸ್ಟ್ ಗಮನದಲ್ಲಿಟ್ಟುಕೊಂಡು ವಿಡಿಯೋದಲ್ಲಿ ಕಂಡು ಬಂದ ಸಂಬಂಧಿತ ಅಧಿಕಾರಿಯನ್ನು ವಿಚಾರಣೆಗೆ ಬಾಕಿಯಿರುವಂತೆ ಅಮಾನತುಗೊಳಿಸಲಾಗಿದೆ. ದೆಹಲಿ ಪೊಲೀಸರು ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆಯ ನೀತಿಯನ್ನು ಹೊಂದಿದ್ದಾರೆ ಎಂದು ದೆಹಲಿ ಟ್ರಾಫಿಕ್ ಪೊಲೀಸರು ಭಾನುವಾರ ಟ್ವೀಟ್ ಮಾಡಿದ್ದಾರೆ.
ಕೊರಿಯನ್ ಪ್ರಜೆ ದೆಹಲಿ ಪೊಲೀಸಪ್ಪನ ಲಂಚ ಪ್ರಕರಣದ ಘಟನೆ ಸೇರಿದಂತೆ ಭಾರತಕ್ಕೆ ಪ್ರವಾಸದ ವಿಡಿಯೋ ಮಾಡಿಕೊಂಡಿದ್ದರು. ಈ ವಿಡಿಯೋವನ್ನು 1.34 ಮಿಲಿಯನ್ ಚಂದಾದಾರರನ್ನು ಹೊಂದಿರುವ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಈ ವಿಡಿಯೋದಲ್ಲಿ ಟ್ರಾಫಿಕ್ ಪೊಲೀಸ್ನನ್ನು 'ಹೇಗಿದ್ದೀರಾ' ವಿದೇಶಿ ಪ್ರಜೆ ಕೇಳುತ್ತಾನೆ. ಇದಕ್ಕೆ ಪ್ರತ್ಯುತ್ತರವಾಗಿ ಪೊಲೀಸ್, 'ದಾರಿ ತಪ್ಪಿದೆ' ಎಂದು ಹೇಳುತ್ತಾನೆ. ಆಗ ವಿದೇಶಿಗ ಕೈಮುಗಿದು ಕ್ಷಮೆ ಕೇಳುತ್ತಾನೆ. ಮುಂದುವರೆದು, ಟ್ರಾಫಿಕ್ ಪೊಲೀಸ್ ಈ ವಿದೇಶಿ ಪ್ರಜೆಗೆ 5000 ರೂಪಾಯಿಗಳ 'ಕೋರ್ಟ್ ದಂಡ' ತೆರಬೇಕೆಂದು ಹೇಳುತ್ತಿರುವುದು ಸೆರೆಯಾಗಿದೆ.