ನವದೆಹಲಿ:ನಗರದ ಜಹಾಂಗೀರ್ಪುರಿಯಲ್ಲಿ ಯುವಕನೊಬ್ಬ ಕಣ್ಮರೆ ಮತ್ತು ಸಾವಿನ ನಂತರ ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವುದು ಬೆಳಕಿಗೆ ಬಂದಿದೆ.
ಮೃತ ಯುವಕ 28 ವರ್ಷದ ಅಸಿಮ್ ದಾಸ್ ಎಂದು ಗುರುತಿಸಲಾಗಿದೆ. ಘಟನೆ ಕುರಿತು ಯುವಕನ ಕುಟುಂಬ ಮತ್ತು ಸ್ಥಳೀಯರು ಮಜ್ಲಿಸ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಯುವಕನನ್ನು ಸಾಯೋವರೆಗೆ ಥಳಿಸಿದ ಜನರ ಗುಂಪು ಬೆಳಗ್ಗೆ ತಂದೆಯೊಂದಿಗೆ ಕೆಲಸಕ್ಕೆ ತೆರಳಿದ್ದ ಅಸಿಮ್ ಸಮಯಕ್ಕೆ ಮನೆಗೆ ಹಿಂದಿರುಗಲಿಲ್ಲ. ಬಳಿಕ ಮಗ ಅಸಿಮ್ ಮೇಲೆ ಹಲ್ಲೆ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಂಡು ಕುಟುಂಬಸ್ಥರು ಬೆಚ್ಚಿಬಿದ್ದಿದ್ದರು.
ಮೆಟ್ರೋ ಸ್ಥಳದಲ್ಲಿ ನಿರ್ಮಾಣ ಸಾಮಗ್ರಿಗಳನ್ನು ಕಳ್ಳತನ ಮಾಡಿದ ಆರೋಪದ ಮೇಲೆ ಅಸಿಮ್ಗೆ ಜನರ ಗುಂಪೊಂದು ಥಳಿಸಿದೆ ಎಂದು ಮೂಲಗಳು ತಿಳಿಸಿವೆ. ತೀವ್ರವಾಗಿ ಗಾಯಗೊಂಡಿದ್ದ ಅಸಿಮ್ ಪ್ರಾಣ ಬಿಟ್ಟಿದ್ದಾನೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಅಸಿಮ್ ಮೃತದೇಹವನ್ನು ವಶಪಡಿಸಿಕೊಂಡು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ.
ಈ ಘಟನೆ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳ ಬೆನ್ನತ್ತಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಮಜ್ಲಿಸ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.