ನೀಮುಚ್ (ಮಧ್ಯಪ್ರದೇಶ):ಮಧ್ಯಪ್ರದೇಶದಲ್ಲಿ ಪ್ರತಿದಿನ ಒಂದಿಲ್ಲೊಂದು ಮಹಿಳೆಯರ ಮೇಲಿನ ದೌರ್ಜನ್ಯದ ಘಟನೆಗಳು ಬೆಳಕಿಗೆ ಬರುತ್ತಿವೆ. ಕೆಲವೊಮ್ಮೆ ಅಪ್ರಾಪ್ತರು ಹಾಗೂ ಮಹಿಳೆಯರು ಅತ್ಯಾಚಾರ, ಕೌಟುಂಬಿಕ ಹಿಂಸೆ, ವರದಕ್ಷಿಣೆ ಕಿರುಕುಳ ಹಾಗೂ ಇತರೆ ಅಪರಾಧಗಳಿಗೆ ಬಲಿಯಾಗುತ್ತಾರೆ. ಅದೇ ರೀತಿ ಮಹಿಳೆಯೊಬ್ಬಳು ಕೌಟುಂಬಿಕ ದೌರ್ಜನ್ಯ ಮತ್ತು ಪತಿಯ ಕ್ರೌರ್ಯಕ್ಕೆ ನಲುಗಿದ್ದಾಳೆ. ನೀಮುಚ್ ಜಿಲ್ಲೆಯ ಜವಾದ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪತಿಯೊಬ್ಬ ತನ್ನ ಪತ್ನಿಯನ್ನು ಹಗ್ಗದಿಂದ ಕಟ್ಟಿ ನೀರು ತುಂಬಿದ ಬಾವಿಗೆ ಎಸೆದಿದ್ದಾನೆ. ಈ ವೇಳೆ ಪತ್ನಿ ತನ್ನನ್ನು ಹೊರಗೆ ತರುವಂತೆ ಪಟ್ಟು ಹಿಡಿದರೂ ಕಲ್ಲು ಹೃದಯದ ಪತಿ ಮಾತ್ರ ಒಪ್ಪಿಲ್ಲ.
ವರದಕ್ಷಿಣೆಗಾಗಿ ಪತ್ನಿಯನ್ನು ಬಾವಿಗೆ ಎಸೆದ ಪತಿ: ನೀಮುಚ್ ಜಿಲ್ಲೆಯ ಜಾವದ್ ಪೊಲೀಸ್ ಠಾಣೆ ವ್ಯಾಪ್ತಿಯ ಕಿರ್ಪುರ ಗ್ರಾಮದಲ್ಲಿ ವ್ಯಕ್ತಿಯೊಬ್ಬ ವರದಕ್ಷಿಣೆಗಾಗಿ ತನ್ನ ಹೆಂಡತಿಯನ್ನು ಚಿತ್ರಹಿಂಸೆ ನೀಡಿದ್ದಾನೆ. ಪತಿ ರಾಕೇಶ್ ಪತ್ನಿಯನ್ನು ಹಗ್ಗದಿಂದ ಕಟ್ಟಿ ಬಾವಿಗೆ ಎಸೆದಿದ್ದಾನೆ. ಮಹಿಳೆ ಅಳುತ್ತಾ ತನ್ನನ್ನು ಬಾವಿಯಿಂದ ಹೊರಗೆ ತರುವಂತೆ ಗಂಡನಿಗೆ ಪರಿ ಪರಿಯಾಗಿ ಬೇಡಿಕೊಂಡಿದ್ದಾಳೆ. ಆದರೆ, ಪತಿ ಮಾತ್ರ ಆಕೆಯನ್ನು ಹೊರಗೆ ತರಲು ಮನಸ್ಸು ಮಾಡಲಿಲ್ಲ. ಅಷ್ಟೇ ಅಲ್ಲ, ರಾಕೇಶ್ ತನ್ನ ಪತ್ನಿಯ ಈ ವಿಡಿಯೋ ಮಾಡಿ, ಸೋದರ ಮಾವನಿಗೆ ಕಳುಹಿಸಿದ್ದಾನೆ. ಪತಿ ತನ್ನ ಪತ್ನಿಯ ಸಹೋದರನಿಂದ ಸುಮಾರು ಐದು ಲಕ್ಷ ರೂಪಾಯಿ ವರದಕ್ಷಿಣೆಗೆ ಬೇಡಿಕೆ ಇಟ್ಟಿದ್ದ. ಇದೇ ವೇಳೆ, ಹೆಂಡತಿ ತನ್ನನ್ನು ಬಾವಿಯಿಂದ ಹೊರಗೆ ತೆಗೆಯುವಂತೆ ಕೇಳಿಕೊಂಡರೂ ಪತಿ ಬಗ್ಗಲಿಲ್ಲ. ಅಷ್ಟರಲ್ಲಿ ಕುಟುಂಬಸ್ಥರ ಮಧ್ಯಪ್ರವೇಶದ ಬಳಿಕ ಮಹಿಳೆಯನ್ನು ಬಾವಿಯಿಂದ ಹೊರ ತೆಗೆಯಲಾಗಿದೆ.