ಶಿವಪುರಿ:ಮಧ್ಯಪ್ರದೇಶದ ಶಿವಪುರಿಯ ಎಡಿಎಂ ಅವರ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಉಪ ಜಿಲ್ಲಾ ಚುನಾವಣಾಧಿಕಾರಿ ಉಮೇಶ್ ಪ್ರಕಾಶ್ ಶುಕ್ಲಾ ಅವರು, "ಈ ದೇಶದ ದೊಡ್ಡ ತಪ್ಪೆಂದರೇ ಅದು ಪ್ರಜಾಪ್ರಭುತ್ವ" ಎಂದು ಹೇಳಿದ್ದಾರೆ. ಈ ವಿಡಿಯೋವನ್ನು ಚುನಾವಣೆಗೆ ಒಂದು ದಿನ ಮುಂಚಿತವಾಗಿ ಮಂಗಳವಾರ ರೆಕಾರ್ಡ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ಆದ್ರೆ 'ಈಟಿವಿ ಭಾರತ' ಈ ವೈರಲ್ ವಿಡಿಯೋದ ಸತ್ಯಾಸತ್ಯತೆಯನ್ನು ಖಚಿತಪಡಿಸುವುದಿಲ್ಲ.
ಭ್ರಷ್ಟ ನಾಯಕರು ಮತ ಹಾಕುವ ಮೂಲಕವೇ ಹುಟ್ಟುತ್ತಾರೆ. ಹಾಗಾಗಿ ಪ್ರಜಾಪ್ರಭುತ್ವವೇ ದೇಶದ ದೊಡ್ಡ ತಪ್ಪಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಹೇಳಿದ್ದಾರೆ. ಮತ್ತೊಂದೆಡೆ ಶಿವಪುರಿ ಕಲೆಕ್ಟರ್ ಅಕ್ಷಯ್ ಕುಮಾರ್ ಸಿಂಗ್ ಅವರು ಗರಿಷ್ಠ ಮತದಾನ ಮಾಡಿಸುವ ಪ್ರಯತ್ನದಲ್ಲಿ ನಿರತರಾಗಿದ್ದಾರೆ. ಇನ್ನೊಂದೆಡೆ ಸಹೋದ್ಯೋಗಿ ಶುಕ್ಲಾ ಮತದಾನದ ಕಲ್ಪನೆಯನ್ನು ವಿರೋಧಿಸಿದರು. ವಿಡಿಯೋದಲ್ಲಿ, ಮತದಾನ ಪ್ರಕ್ರಿಯೆಯಲ್ಲಿನ ಲೋಪದೋಷಗಳ ಬಗ್ಗೆ ದೂರು ನೀಡಲು ಬಂದ ಜನರನ್ನು ಸಮಾಧಾನಪಡಿಸಲು ಶುಕ್ಲಾ ಪ್ರಯತ್ನಿಸಿದರು. ಕೇವಲ ಭ್ರಷ್ಟ ನಾಯಕರನ್ನು ಮತ ಚಲಾಯಿಸುವ ಮೂಲಕ ಪರಿಚಯಿಸಲಾಗುತ್ತಿದೆ ಎಂದು ಹೇಳಿದರು ಎನ್ನಲಾಗ್ತಿದೆ.