ಚೆನ್ನೈ(ತಮಿಳುನಾಡು): ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ನಡೆಯುತ್ತಿರುವಂತೆ ತಮಿಳುನಾಡಿನಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಗೆ ಚುನಾವಣೆ ಆರಂಭವಾಗಿದ್ದು, ವಿವಿಧ ರಾಜಕೀಯ ಮುಖಂಡರು ಪಕ್ಷದ ತಮ್ಮ ವೋಟು ಚಲಾಯಿಸಿದ್ದಾರೆ.
ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್ ಚೆನ್ನೈನ ತೇನಮಪೆಟ್ಟೈ ವಾರ್ಡ್ ನಂಬರ್ 122ರಲ್ಲಿ ಮತದಾರರ ಸಾಲಿನಲ್ಲಿ ನಿಂತು ತಮ್ಮ ಮತವನ್ನು ಚಲಾಯಿಸಿದ್ದಾರೆ. ಅವರ ಜೊತೆಗೆ ಸ್ಟಾಲಿನ್ ಪತ್ನಿ ದುರ್ಗಾ ಸ್ಟಾಲಿನ್ ಕೂಡಾ ಸರದಿಯಲ್ಲಿ ನಿಂತು ಮತ ಚಲಾಯಿಸಿದ್ದಾರೆ. ನಂತರ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಕೂಡಾ ಮತ ಚಲಾಯಿಸಿದರು. ನಟ ವಿಜಯ್ ಕೂಡಾ ಮತದಾನ ಮಾಡಿದ್ದಾರೆ.
ಮತ ಚಲಾಯಿಸಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಟಾಲಿನ್ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪ್ರತಿಯೊಬ್ಬ ಮತದಾರರು ಕಡ್ಡಾಯವಾಗಿ ಮತ ಚಲಾಯಿಸಬೇಕು. ಅದು ಅವರ ಪ್ರಜಾಸತ್ತಾತ್ಮಕ ಕರ್ತವ್ಯವಾಗಿದೆ. ಈ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಡಿಎಂಕೆ ಪ್ರಚಂಡ ಗೆಲುವು ಸಾಧಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದರು.