ಕರ್ನೂಲ್ (ಆಂಧ್ರಪ್ರದೇಶ): ದೊಣ್ಣೆಯಿಂದ ಬಡಿದುಕೊಳ್ಳುವ ಬನ್ನಿ ಹಬ್ಬದ ಆಚರಣೆ ವೇಳೆ ಹಿಂಸಾಚಾರ ಭುಗಿಲೆದ್ದು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಆಂಧ್ರಪ್ರದೇಶ ಕರ್ನೂಲ್ ಜಿಲ್ಲೆಯಲ್ಲಿ ನಿನ್ನೆ ನಡೆದಿದೆ.
ಆಂಧ್ರದ ಕರ್ನೂಲ್ ಜಿಲ್ಲೆಯ ದೇವರಗಟ್ಟು ಗ್ರಾಮದ ಮಾಳವಿ ಮಲ್ಲೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ದಸರಾ (ಬನ್ನಿ ಉತ್ಸವ) ಪ್ರಯುಕ್ತ ಪ್ರತಿವರ್ಷ 'ಬಡಿಗೆ ಬಡಿದಾಟ' ಕಾಳಗವನ್ನು ನಡೆಸುವುದು ವಾಡಿಕೆ. ನಾನಾ ಭಾಗಗಳಿಂದ ಸಾವಿರಾರು ಭಕ್ತರು ಬಂದು ಇದರಲ್ಲಿ ಪಾಲ್ಗೊಳ್ಳುತ್ತಾರೆ. ಪ್ರತಿ ಬಾರಿಯೂ ಈ ಕಾರ್ಯಕ್ರಮದಲ್ಲಿ ಹಿಂಸಾಚಾರ ನಡೆಯುತ್ತದೆ, ಅನೇಕ ಜನರು ಗಾಯಗೊಳ್ಳುತ್ತಾರೆ.
'ದೇವರಗಟ್ಟು ಬಡಿಗೆ ಬಡಿದಾಟ'ದಲ್ಲಿ ಭುಗಿಲೆದ್ದ ಹಿಂಸಾಚಾರ 2008 ರಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಈ ಕಾಳಗವನ್ನು ನಿಷೇಧಿಸಲು ನಿರ್ದೇಶನ ನೀಡಿತ್ತು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ನಿಷೇಧದ ನಡುವೆಯೂ ಪ್ರತಿ ವರ್ಷ ನಡೆಯುತ್ತಲೇ ಇದೆ.
ಕಳೆದ ಬಾರಿ ಕೋವಿಡ್ ಸಾಂಕ್ರಾಮಿಕ ಹಿನ್ನೆಲೆ ಕರ್ನೂಲ್ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಜಿಲ್ಲಾಡಳಿತ ಈ ಆಚರಣೆಯನ್ನು ರದ್ದು ಮಾಡಿ ಆದೇಶ ನೀಡಿತ್ತು. ಆದರೆ, ಈ ಆದೇಶವನ್ನು ಮೀರಿ, ಮಾಸ್ಕ್ ಧರಿಸದೇ, ಸಾಮಾಜಿಕ ಅಂತರ ಕಾಯ್ದುಕೊಳ್ಳದೇ, ಯಾವುದೇ ಕೋವಿಡ್ ನಿಯಮ ಪಾಲಿಸದೇ ಆಚರಿಸಲಾಗಿತ್ತು.
ಇನ್ನು ಈ ವರ್ಷವೂ ಇದೇ ಪಾಡಾಗಿದೆ. ಪೊಲೀಸರು ಎಷ್ಟೇ ಕಠಿಣ ಕ್ರಮಗಳನ್ನು ಕೈಗೊಂಡರೂ, ಲಾಠಿ ಪ್ರಹಾರ ನಡೆಸಿದರೂ ನಿನ್ನೆ ಬಡಿದಾಟದ ವೇಳೆ ಹಿಂಸಾಚಾರ ಭುಗಿಲೆದ್ದಿದೆ. ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ನಾಲ್ವರ ಸ್ಥಿತಿ ಗಂಭೀರವಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.