ಭೋಪಾಲ್ :ಭಾನುವಾರ ರಾಮನವಮಿ ಆಚರಣೆ ವೇಳೆ ಮಧ್ಯಪ್ರದೇಶದ ಎರಡು ಜಿಲ್ಲೆಗಳಲ್ಲಿ ಕೋಮುಗಲಭೆ ಭುಗಿಲೆದ್ದಿದೆ. ಖಾರ್ಗೋನ್ ಜಿಲ್ಲೆಯಲ್ಲಿ ಮೊದಲ ಹಿಂಸಾಚಾರದ ಘಟನೆ ವರದಿಯಾಗಿದೆ. ಸುಮಾರು ಆರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಬರ್ವಾನಿ ಜಿಲ್ಲೆಯ ಸೆಂಧ್ವಾ ಪಟ್ಟಣದಲ್ಲಿಯೂ ಇದೇ ರೀತಿಯ ಘಟನೆ ಸಂಭವಿಸಿದೆ. ಇದೀಗ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಮಧ್ಯಪ್ರದೇಶದ ಮೂರು ಪ್ರದೇಶಗಳಲ್ಲಿ ಕರ್ಫ್ಯೂ ಜಾರಿಗೊಳಿಸಿ, CrPCಯ ಸೆಕ್ಷನ್ 144 ಹೇರಿದ್ದಾರೆ.
ಖಾರ್ಗೋನ್‌ನಲ್ಲಿ ರಾಮನವಮಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ. ಕೆಲವು ವಾಹನಗಳಿಗೆ ಬೆಂಕಿ ಹಚ್ಚಿದ ಘಟನೆಗಳೂ ವರದಿಯಾಗಿದೆ. ಈ ಹಿಂಸಾಚಾರದ ಪರಿಸ್ಥಿತಿಯನ್ನು ಹತೋಟಿಗೆ ತೆಗೆದುಕೊಳ್ಳಲು ಪೊಲೀಸರು ಅಶ್ರುವಾಯು ಶೆಲ್(ಟೀಯರ್ ಗ್ಯಾಸ್ ಶೆಲ್)ಗಳನ್ನು ಹಾರಿಸಿದ್ದಾರೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಕಲ್ಲು ತೂರಾಟದಲ್ಲಿ ಕೆಲವು ಪೊಲೀಸ್ ಸಿಬ್ಬಂದಿ ಮತ್ತು ಜನರು ಗಾಯಗೊಂಡಿದ್ದಾರೆ.
ರಾಮನವಮಿ ಮೆರವಣಿಗೆಯಲ್ಲಿ ಡಿಜೆ ಸಂಗೀತವನ್ನು ಜೋರಾಗಿ ಹಾಕಿರುವುದನ್ನು ವಿರೋಧಿಸಿದ ನಿರ್ದಿಷ್ಟ ಸಮುದಾಯದ ಜನರು ಮೆರವಣಿಗೆಯ ಮೇಲೆ ದಾಳಿ ಮಾಡಿದ್ದಾರೆ. ಇದು ಎರಡು ಸಮುದಾಯಗಳ ನಡುವೆ ಘರ್ಷಣೆಗೆ ಕಾರಣವಾಗಿ, ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ಕೈಮೀರಿದ ಕಾರಣ ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ.