ನವದೆಹಲಿ:ಆರ್ಥಿಕ ಬಿಕ್ಕಟ್ಟಿನಿಂದಾಗಿ ದ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಹಿಂಸಾಚಾರ ಹೆಚ್ಚಾಗಿದೆ. ಹೀಗಾಗಿ, ಅಲ್ಲಿನ ಪ್ರಜೆಗಳು ಸಮುದ್ರ ಮಾರ್ಗವಾಗಿ ಭಾರತದೊಳಗೆ ಒಳನುಸುಳುವ ಸಾಧ್ಯತೆ ದಟ್ಟವಾಗಿರುವ ಕಾರಣ ತಮಿಳುನಾಡು, ಮಂಗಳೂರಿನ ಕರಾವಳಿ ಪ್ರದೇಶದಲ್ಲಿ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಗೃಹ ವ್ಯವಹಾರಗಳ ಸಚಿವಾಲಯ ಮಹತ್ವದ ಆದೇಶ ಹೊರಡಿಸಿದ್ದು, ಇದರ ಬೆನ್ನಲ್ಲೇ ಕರಾವಳಿ ಪ್ರದೇಶಗಳಲ್ಲಿ ನೌಕಾ ಪಡೆ ಬಲ ಹೆಚ್ಚಿಸಲಾಗಿದೆ.
ಶ್ರೀಲಂಕಾದಲ್ಲಿ ಭೀಕರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಹಾಗೂ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಯುತ್ತಿರುವ ಕಾರಣ ಜೈಲಿನಲ್ಲಿರುವ ಕೈದಿಗಳು ತಪ್ಪಿಸಿಕೊಂಡು ತಮಿಳುನಾಡಿಗೆ ಪಲಾಯನ ಮಾಡಲು ಮುಂದಾಗಿದ್ದಾರೆ. ಈಗಾಗಲೇ ಲಭ್ಯವಾಗಿರುವ ಮಾಹಿತಿ ಪ್ರಕಾರ ಕೊಲೆ ಮತ್ತು ಕಳ್ಳಸಾಗಾಣಿಕೆಯಲ್ಲಿ ಭಾಗಿಯಾಗಿದ್ದ 50ಕ್ಕೂ ಹೆಚ್ಚು ಕೈದಿಗಳು ಜೈಲಿನಿಂದ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ.
ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಗೃಹ ಸಚಿವಾಲಯ ಸಮುದ್ರದ ಗಡಿ ಪ್ರದೇಶಗಳಲ್ಲಿ ಹೆಚ್ಚಿನ ಭದ್ರತೆ ಒದಗಿಸಲು ಆದೇಶ ನೀಡಿದೆ. ತಮಿಳುನಾಡು, ಮಂಗಳೂರು ಕರಾವಳಿ ಪ್ರದೇಶಗಳಲ್ಲಿ ನಿರಾಶ್ರಿತರ ರೂಪದಲ್ಲಿ ಕೈದಿಗಳು ದೇಶಕ್ಕೆ ಅತಿಕ್ರಮ ಮಾಡುವುದನ್ನ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.