ನವದೆಹಲಿ: ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೂತನ ಕಾರ್ಯದರ್ಶಿಯಾಗಿ ವಿನಯ್ ಮೋಹನ್ ಕ್ವಾತ್ರಾ ರವಿವಾರ ಅಧಿಕಾರ ಸ್ವೀಕರಿಸಿದರು. ಶನಿವಾರ ಈ ಸ್ಥಾನದಲ್ಲಿದ್ದ ಹರ್ಷವರ್ಧನ್ ಶ್ರೀಂಗ್ಲಾ ನಿವೃತ್ತಿ ಹೊಂದಿದ್ದು ವಿದೇಶಾಂಗ ಕಾರ್ಯದರ್ಶಿಗಳ ಹುದ್ದೆ ತೆರವಾಗಿತ್ತು.
1988ರ ಬ್ಯಾಚ್ನ ಭಾರತೀಯ ವಿದೇಶಾಂಗ ಸೇವೆಗಳ (ಐಎಫ್ಎಸ್) ಅಧಿಕಾರಿಯಾದ ಕ್ವಾತ್ರಾ, ಪ್ರಸ್ತುತ ನೇಪಾಳದಲ್ಲಿ ಭಾರತೀಯ ರಾಯಭಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಇವರು ಭಾರತದ ನೆರೆ ರಾಷ್ಟ್ರಗಳು ಸೇರಿದಂತೆ ಅಮೆರಿಕ ಮತ್ತು ಚೀನಾ, ಯುರೋಪ್‌ನೊಂದಿಗೆ ವ್ಯವಹರಿಸುವ ವಿದೇಶಾಂಗ ನೀತಿಗಳಲ್ಲಿ ಪರಿಣತಿ ಹೊಂದಿದ್ದಾರೆ.
2020ರಲ್ಲಿ ನೇಪಾಳ ರಾಯಭಾರಿಯಾಗಿ ನೇಮಕವಾಗಿದ್ದ ಇವರು, 2017-2020ರವರೆಗೆ ಫ್ರಾನ್ಸ್ನಲ್ಲಿ ಕಾರ್ಯ ನಿರ್ವಹಿಸಿದ್ದರು. ಇದಕ್ಕೂ ಮೊದಲು 2015ರಿಂದ 2017ರವರೆಗೆ ಪ್ರಧಾನಿ ಕಾರ್ಯಾಲಯದಲ್ಲಿ ಜಂಟಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿರುವ ಕ್ವತ್ರಾ, ರಾಜತಾಂತ್ರಿಕತೆಯಲ್ಲಿ ಒಟ್ಟಾರೆ 32 ವರ್ಷಗಳ ಅನುಭವ ಹೊಂದಿದ್ದಾರೆ.
ಮೇಲಾಗಿ, ಉಕ್ರೇನ್-ರಷ್ಯಾ ನಡುವಿನ ಯುದ್ಧದ ಮಧ್ಯೆ ಇವರು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿಯಾಗಿ ನೇಮಕವಾಗಿದ್ದಾರೆ. ನೆರೆಯ ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟು ಮತ್ತು ಅಫ್ಘಾನಿಸ್ತಾನದ ಪರಿಸ್ಥಿತಿಯ ಬೆಳವಣಿಗೆಗಳ ನಡುವೆ ಕ್ವಾತ್ರಾ ಮಹತ್ವದ ಜವಾಬ್ದಾರಿ ಹೊತ್ತುಕೊಂಡಿರುವುದು ಇಲ್ಲಿ ಗಮನಾರ್ಹ.
ಇದನ್ನೂ ಓದಿ:ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್ ದರ ಮತ್ತೆ ಹೆಚ್ಚಳ: ಹೊಸ ದರ ಹೀಗಿದೆ..